ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಾಟೆ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದ. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದ್ದು ರಾಜಕಾರಣಿಗಳ ನಡೆಯ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ.

ಹೌದು! ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್‌ನಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದ್ದು, ಕಾಂಗ್ರೆಸ್ನವರೇ ಬೆಂಕಿ ಹಚ್ಚಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಈ ಬೆಂಕಿ ಪ್ರಕರಣ ಮತ್ತೆ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಮಾಡೆಲ್ ಹೌಸ್ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಇಬ್ಬರ ಹೆಸರಿನಲ್ಲಿದ್ದು, 13-14 ವರ್ಷಗಳ ಹಿಂದೆ ಮಾಡಲಾಗಿದೆ. ಈ ಹೌಸ್ ಒಟ್ಟು 109 ಎಕರೆ ಟೋಟಲ್ G ಸ್ವ್ಕೇರ್ ಹೊಂದಿದೆ.
ಕೈ ಶಾಸಕ ಭರತ್ ರೆಡ್ಡಿ ವಿರುದ್ಧ ಆರೋಪ: ಈ ಘಟನೆ ಬಗ್ಗೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಈಗ ಬೆಂಕಿ ಹಚ್ಚಿದ್ದಾರೆ. ನಮಗೆ ಸೇರಿದ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಖರೀದಿದಾರರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಿಸಿದ್ದೆವು. ಇಂದು (ಜನವರಿ 23) ಸಂಜೆ ಆರೂವರೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿದವರನ್ನು ಹಿಡಿಯಲು ಕೆಲವರು ಯತ್ನಿಸಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಮಾಡಲ್ ಹೌಸ್ಗೆ ಪೆಟ್ರೋಲ್, ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರೇ ಇದನ್ನು ಮಾಡಿರುವುದು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಕೂಡ ಬಂದಿದ್ದಾರೆ. ಇದನ್ನು ನಾವು ಬಿಡಲ್ಲ, ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದರು.
ಇನ್ನು ಈ ಅಗ್ನಿ ಅವಘಡದ ಬಗ್ಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿದ್ದು, ಬ್ಯಾನರ್ ಗಲಾಟೆಯಾಗಿ ಇನ್ನೂ 15 ದಿನಗಳು ಸಹ ಆಗಿಲ್ಲ. ಆಗಲೇ ಇಂತಹ ಘಟನೆ ನಡೆದಿದೆ. ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ಜತೆ ನಾನು ಮಾತಾಡಿದ್ದೇನೆ ಎಂದು ಮಾಧ್ಯವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Related










