NEWSದೇಶ-ವಿದೇಶನಮ್ಮರಾಜ್ಯ

ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಆಂಧ್ರ ಸಿಎಂ ನಾಯ್ಡು ಆತಂಕ- ಮನರೇಗಾ ಕಾಯ್ದೆ ಮರುಸ್ಥಾಪಿಸಲೇಬೇಕು ಎಂದ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ವಿಬಿ ಜಿ ರಾಮ್ ಜಿ ಕಾಯ್ದೆಯ ಜಾರಿ ಬಗ್ಗೆ ವ್ಯಕ್ತಪಡಿಸಿರುವ ಆತಂಕ, ರಾಜಕೀಯವಾಗಿ ಮಹತ್ವದ್ದಾಗಿದೆ ಮತ್ತು ಕೇಂದ್ರ- ರಾಜ್ಯ ಸಂಬಂಧದ ದೃಷ್ಟಿಯಿಂದ ಗಂಭೀರ ಪರಿಣಾಮಗಳ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶೇಷವಾಗಿ ಈ ಕಾಯ್ದೆಯಲ್ಲಿ ಅನುದಾನ ಹಂಚಿಕೆಯ ಹೊಸ ಮಾದರಿ ಹಾಗೂ ರಾಜ್ಯಗಳ ಮೇಲೆ ಬರುವ ಹೆಚ್ಚುವರಿ ಆರ್ಥಿಕ ಹೊರೆಯ ಕುರಿತು ಚಂದ್ರಬಾಬು ನಾಯ್ಡು ಅವರು ವ್ಯಕ್ತಪಡಿಸಿರುವ ಭೀತಿಯನ್ನು ಎಲ್ಲ ರಾಜ್ಯ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಆತಂಕಗಳು ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಅಸ್ತಿತ್ವಕ್ಕಾಗಿ ನೆಚ್ಚಿಕೊಂಡಿರುವ ಮೈತ್ರಿ ಪಕ್ಷದಿಂದಲೇ ಬಂದಿರುವುದು ವಿಶೇಷ ಎಂದು X ಮಾಡಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ವಿಬಿ‌ ಜಿ‌ ರಾಮ್ ಜಿ ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಪರಸ್ಪರ ಸಹಕಾರದ ಆಶಯಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಎಚ್ಚರಿಸುತ್ತಿವೆ. ಈ ಕಾಯ್ದೆಯು ಹಣಕಾಸಿನ ಹೊಣೆಗಾರಿಕೆಯನ್ನು‌ ರಾಜ್ಯಗಳ‌ ಹೆಗಲಿಗೆ ವರ್ಗಾಯಿಸುತ್ತದೆ ಎಂಬುದು ನಮ್ಮ ಆಕ್ಷೇಪ ಎಂದು ವಿವರಿಸಿದ್ದಾರೆ.

ಇನ್ನು ಈಗ ಬಿಜೆಪಿಯೊಂದಿಗಿನ ಮೈತ್ರಿಕೂಟದ ಮುಖ್ಯಮಂತ್ರಿ ಇದೇ ಆತಂಕಗಳನ್ನು ವ್ಯಕ್ತಪಡಿಸಿರುವುದು, ಎನ್‌ಡಿಎ ಮೈತ್ರಿ ಒಳಗಿನ ಒಡಕನ್ನು ಬಹಿರಂಗಪಡಿಸುತ್ತಿದೆ ಮತ್ತು ಈ ಕಾಯ್ದೆಯ ಬಗ್ಗೆ ಬಿಜೆಪಿಯ ಸಮರ್ಥನೆ ಕೂಡ ಎಂತಹ ಪೊಳ್ಳು ಎಂಬುದಕ್ಕೆ ಸಾಕ್ಷ್ಯ ನೀಡಿದಂತಿದೆ. ಇದೇ ರೀತಿಯ ಆಕ್ಷೇಪಣೆಗಳನ್ನು ಹಿಂದೆ ನಾವು ಮಾಡಿದಾಗ ಅದನ್ನು ರಾಜಕೀಯ ಪ್ರೇರಿತ ಟೀಕೆ ಎಂದು ತಳ್ಳಿ ಹಾಕಿದವರು, ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಎರಡು ಕಾಯ್ದೆಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಗ್ರಾಮೀಣ ಉದ್ಯೋಗವು ಕಾನೂನುಬದ್ಧ ಹಕ್ಕಾಗಿದ್ದು, ಕೇಂದ್ರ ಸರ್ಕಾರದ ನಿಶ್ಚಿತ ಅನುದಾನದಿಂದ ಜಾರಿಯಾಗುತ್ತಿತ್ತು. ಆದರೆ ಹೊಸ ಕಾಯ್ದೆಯಡಿಯಲ್ಲಿ ಆ ಗ್ಯಾರಂಟಿ ಇಲ್ಲವಾಗಿದೆ. ರಾಜ್ಯಗಳು ಕಾಮಗಾರಿಗಳನ್ನು ಅನುಷ್ಠಾನ ಮಾಡಲು ವೆಚ್ಚವನ್ನು ಹಂಚಿಕೊಳ್ಳಬೇಕಾಗಿದೆ, ಅಲ್ಲದೆ ಅನುದಾನ ಸಿಗುವುದಕ್ಕೆ ಯಾವುದೇ ಕಾನೂನಾತ್ಮಕ ಖಾತರಿ ಸಹ ಇಲ್ಲ. ಜನರ ಹಕ್ಕಾಗಿದ್ದ ಉದ್ಯೋಗ ಭದ್ರತೆಯನ್ನು ಈಗ ಸಂಧಾನದ ವಿಷಯವನ್ನಾಗಿ ಮಾಡಲಾಗಿದೆ.

ಈ ಬದಲಾವಣೆಯ ಪರಿಣಾಮಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಒಬ್ಬ ಮುಖ್ಯಮಂತ್ರಿ “ಪರ್ಯಾಯ ಆರ್ಥಿಕ ನೆರವಿಗಾಗಿ” ಖಾಸಗಿ ಮಾತುಕತೆ” ನಡೆಸಬೇಕಾಗಿರುವ ಸ್ಥಿತಿ ಉದ್ಭವಿಸಿದೆ ಎಂದರೆ, ಅನುದಾನ ಪಡೆಯುವ ಅವಕಾಶವು ಕಾನೂನಾತ್ಮಕವಾಗಿರದೆ, ರಾಜಕೀಯ ಲೆಕ್ಕಾಚಾರಗಳ‌ ಮೇಲೆ ನಿರ್ಧರಿತವಾಗಿದೆ ಎಂಬ ಅಂಶ ಸ್ಪಷ್ಟ.

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, ಅನುದಾನ ಹಂಚಿಕೆಯು ರಾಜಕೀಯ ಹೊಂದಾಣಿಕೆಯ ಮೇಲೆ ನಿರ್ಧರಿತವಾಗುವ ಅಪಾಯವಿದೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಇದು ಮಾರಕವಾಗಲಿದೆ.

ಎನ್‌ಡಿಎ ಮೈತ್ರಿಕೂಟದ ಪಾಲುದಾರರು, ವಿಶೇಷವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಈ ಹೊಸ ನಿಯಮಗಳಲ್ಲಿ ಅಸ್ಥಿರತೆ ಕಂಡುಬಂದರೆ ಖಂಡಿತವಾಗಿಯೂ ಇದನ್ನು ಸಂಸತ್ತಿನಲ್ಲಿ ಬಹಿರಂಗವಾಗಿ ಚರ್ಚಿಸಬೇಕು. ಅದನ್ನು ಬಿಟ್ಟು ವಿಶೇಷ ಅನುದಾನವೋ ಅಥವಾ ಖಾಸಗಿ ಭರವಸೆಗಳ ಮೂಲಕವೋ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದು ಮಾಡಿ, ಅಗತ್ಯ ಸುಧಾರಣೆಗಳೊಂದಿಗೆ ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸಲೇಬೇಕು ಎಂಬಂಶ ಸ್ಪಷ್ಟವಾಗಿ ಗೋಚರಿಸುತ್ತಿದೆ. ಉದ್ಯೋಗ ಭದ್ರತೆಯನ್ನು ಅನಿಶ್ಚಿತತೆಗೆ ಒಡ್ಡಲು ಸಾಧ್ಯವಿಲ್ಲ. ನಿಶ್ಚಿತ ಅನುದಾನ ಮತ್ತು ಎಲ್ಲ ರಾಜ್ಯಗಳಿಗೂ ಸಮಾನ ನ್ಯಾಯದ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯವಿದೆಯೇ ಹೊರತು, ರಾಜಕೀಯ ಹೊಂದಾಣಿಕೆಯ ಲೆಕ್ಕಾಚಾರಗಳಿಂದಲ್ಲ ಎಂದು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!