ಬೆಂಗಳೂರು: ಶಿರಾ ವಿಧಾನಸಭೆ ಕ್ಷೇತ್ರದ ಶಾಸಕರ ಅಕಾಲಿಕ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುವ ಉಪಚುನಾವಣೆಯನ್ನು ಪರಮೇಶ್ವರ್ ನೇತೃತ್ವದಲ್ಲಿ ಎದುರಿಸಲಾಗುವುದು. ಇವರಿಗೆ ಮಾಜಿ ಶಾಸಕ ರಾಜಣ್ಣ ಕೋ-ಚೇರ್ಮನ್ ಆಗಿ ಸಾಥ್ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶಿರಾ ಉಪ ಚುನಾವಣೆ ಸಂಬಂಧ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮಾತನಾಡಿ, ಪಕ್ಷದ ಎಲ್ಲರೂ ಒಟ್ಟಿಗೆ ಸೇರಿಯೇ ಚುನಾವಣೆ ಎದುರಿಸಲಿದ್ದೇವೆ. ಈ ಬಗ್ಗೆ ತುಮಕೂರು ಜಿಲ್ಲೆಯ ನಾಯಕರ ಜತೆ ಸಭೆ ಮಾಡಿದ್ದೇವೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಚಿವ ಜಯಚಂದ್ರ ಕಣಕ್ಕೀಳಿಯಲಿದ್ದಾರೆ. ರಾಜಣ್ಣ ಅವರೇ ಜಯಚಂದ್ರ ಅವರ ಹೆಸರು ಸೂಚಿಸಿದ್ದು, ಎಲ್ಲರ ಅಭಿಪ್ರಾಯವನ್ನು ಕೂಡ ಪಡೆಯಲಾಗಿದೆ. ಪಕ್ಷದ ವರಿಷ್ಠರಿಗೂ ಇದನ್ನೇ ಕಳುಹಿಸಿಕೊಡಲಿದ್ದೇವೆ ಎಂದು ಹೇಳಿದರು.
ಇಂದಿನಿಂದಲೇ ಚುನಾವಣೆ ಕಾರ್ಯ ಆರಂಭವಾಗಲಿದ್ದು, ನಾವೆಲ್ಲರೂ ಜಯಚಂದ್ರ ಅವರಿಗೆ ಸಾಥ್ ನೀಡುತ್ತೇವೆ. ಕ್ಷೇತ್ರದ ಹಿತದೃಷ್ಟಿಯಿಂದ ಗೆಲ್ಲಲು ನಾವೆಲ್ಲರೂ ಶತ ಪ್ರಯತ್ನ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮತ್ತಿತರರು ಸಭೆಯಲ್ಲಿ ಇದ್ದರು.