ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ ಎಂಬ ತಮ್ಮ ಟೀಕಾಕಾರರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಿಡಿಕಾರಿದ್ದಾರೆ.
ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಸದಸ್ಯ ಎನ್ನವುದಕ್ಕಿಂತ ರಾಜ್ಯ ಬಿಜೆಪಿಯ ಜವಾಬ್ದಾರಿಯುತ ಉಪಾಧ್ಯಕ್ಷನಾಗಿದ್ದೇನೆ ಎಂಬುದನ್ನು ಮರೆಯಬೇಡಿ ಎಂದು ತಮ್ಮ ಟೀಕಾಕಾರಿಗೆ ಜವಾಬು ನೀಡಿದ್ದಾರೆ.
ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಈ ಪ್ರಜಾಪ್ರಭುತ್ವ ದೇಶದ ಅತ್ಯುನ್ನತ ಸ್ಥಾನವನ್ನಲಂಕರಿಸಿದ ಪ್ರಧಾನಮಂತ್ರಿಗಳನ್ನೇ ತಮ್ಮ ಮನೆಗೆ ಬುಲಾವ್ ಮಾಡಿಕೊಳ್ಳುತ್ತಿದ್ದ ಗುಲಾಮಿ ಪದ್ಧತಿಯ ಸಂಸ್ಕೃತಿ ನಮ್ಮದಲ್ಲ ಎಂದು ಹೆಸರೇಳದೆ ತಮ್ಮ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ಬಳಿ ಗೌರವ, ವಿಶ್ವಾಸವಿರಿಸಿ ಯಾರೇ ಬಂದರೂ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದಿರುವ ಅವರು, ವಿಪಕ್ಷಗಳು ಸದಾ ಹಳದಿ ಕನ್ನಡಕ ಧರಿಸಿ, ನನ್ನ ಚಲನವಲನದ ಮೇಲೆ ನಿಗಾ ಇರಿಸುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯ ಕುರಿತು ಸರ್ಕಾರಕ್ಕೆ ಸಲಹೆ ನೀಡಲಿ, ಅದುವೇ ರಾಜಕೀಯ ಪಕ್ಷದ ನಿಜವಾದ ಪ್ರಜಾತಾಂತ್ರಿಕ ನಡೆ ಎಂದು ತಿವಿದಿದ್ದಾರೆ.
ಯಡಿಯೂರಪ್ಪನವರ ಆಡಳಿತದಲ್ಲಿ ವಿಜಯೇಂದ್ರ ಅವರು ತೆರೆಮರೆಯಲ್ಲಿ ಆಡಳಿತದ ನೊಗ ಹಿಡಿದಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅವರು ವಿಪಕ್ಷದ ನಾಯಕರನ್ನು ಹಿಗ್ಗಾಮುಗ್ಗ ಜಾಡಿಸಿದ್ದಾರೆ.
ನನ್ನ ಬಳಿ ಗೌರವ, ವಿಶ್ವಾಸವಿರಿಸಿ ಯಾರೇ ಬಂದರೂ ಅದಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. "ವಿಪಕ್ಷಗಳು ಸದಾ ಹಳದಿ ಕನ್ನಡಕ ಧರಿಸಿ, ನನ್ನ ಚಲನವಲನದ ಮೇಲೆ ನಿಗಾ ಇರಿಸುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯ ಕುರಿತು ರಚನಾತ್ಮಕ ಸಲಹೆಗಳಿದ್ದಲ್ಲಿ ಸರ್ಕಾರಕ್ಕೆ ನೀಡಲಿ, ಅದುವೇ ರಾಜಕೀಯ ಪಕ್ಷದ ನಿಜವಾದ ಪ್ರಜಾತಾಂತ್ರಿಕ ನಡೆಯಾಗಿದೆ.’’ (2/2)
— Vijayendra Yeddyurappa (@BYVijayendra) September 16, 2020