NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌ.ಸ.ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗೆ ದೂರು

ವಿಜಯಪಥ ಸಮಗ್ರ ಸುದ್ದಿ
  • ಸಂಘದ ಸದಸ್ಯರಲ್ಲದ ವ್ಯಕ್ತಿಗಳು ಬಂದು ಕಾನೂನು ಬಾಹಿರವಾಗಿ 90 ರಿಂದ 100 ಮತಗಳ ಚಲಾವಣೆ ಮಾಡಿರುವ ಆರೋಪ 
  • ಡ್ಯೂಟಿ ಮೇಲಿದ್ದ ಸಂಘದ ಸದಸ್ಯರ ಓಟ್‌ ಮಾಡಿದ ಸಂಘದ ಸದಸ್ಯರಲ್ಲದ ವ್ಯಕ್ತಿಗಳ ವಿರುದ್ಧ ಹಾಗೂ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
  • ಮಾ.15ರಂದು ನಡೆದ ಚುನಾವಣೆಯಲ್ಲಿ ಈ ಅಕ್ರಮ ವಾಸನೆ

ವಿಜಯಪುರ: ವಿಜಯಪುರ ವಿಭಾಗದ ಕೆಎಸ್ಆರ್ಟಿಸಿ ನೌಕರರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇದೇ ಮಾ.15ರಂದು ನಡೆದ ಚುನಾವಣೆಯಲ್ಲಿ ಅಕ್ರಮ (bogus voting) ಮತದಾನವಾಗಿದ್ದು, ಮರುಮತದಾನ ಮಾಡಬೇಕು ಹಾಗೂ ಆಕ್ರಮ ಮತದಾನಕ್ಕೆ ಆಸ್ಪದ ನೀಡಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡು ಅಮಾನತು ಮಾಡಬೇಕು ಎಂದು ರಾಜಶೇಖರ್ ಹಾಗೂ ಎಂ.ಎನ್.ಇಲಕಲ್ ಆಗ್ರಹಿಸಿದ್ದಾರೆ.

ಈ ಸಂಬಂಧ ಕೆಕೆಆರ್ಟಿಸಿ ಎಸ್ಸಿ/ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ವಿಭಾಗದ ಅಧ್ಯಕ್ಷ ರಾಜಶೇಖರ್ ಕೊಣ್ಣೂರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ವಿಜಯಪುರ ವಿಭಾಗ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎನ್.ಇಲಕಲ್ ಅವರು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರ ಮೂಲಕ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಈ ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಪೂರ್ಣ ವಿವರ: ಇದೇ ಮಾ.15ರಂದು ಕೆ.ಎಸ್.ಆರ್.ಟಿ.ಸಿ ನೌಕರರ ಸಹಕಾರ ಸಂಘ ನಿ, ವಿಜಯಪುರ ವಿಭಾಗ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ-2026 ರಲ್ಲಿ ಅಕ್ರಮ ಮತದಾನ ವಾಗಿದೆ. ಈ ವಿಷಯದ ಬಗ್ಗೆ Returning Officer ಆರ್.ಎನ್.ಆಳೂರ ಅವರಿಗೆ  ಚುನಾವಣಾ ನಾಮ ಪತ್ರ ಸಲ್ಲಿಸುವ ಸಮಯದಲ್ಲಿ ಈ ಹಿಂದೆ ನಡೆದ ಚುನಾವಣೆಯಲ್ಲಿ ಹಲವು ಅಕ್ರಮ ಮತದಾನವಾಗಿವೆ.  ಮತ್ತೆ ಈ ಅಕ್ರಮ ಮತದಾನವಾಗದಂತೆ ಕಟ್ಟು ನಿಟ್ಟಾಗಿ ತಡೆ ಹಿಡಿಯಬೇಕು ಹಾಗೂ ಸಹಕಾರ ಸಂಘದಲ್ಲಿರುವ ಸದಸ್ಯರ ಛಾಯಾಚಿತ್ರ ವಿರುವ ರಿಜಿಸ್ಟರ್‌ ತಾಳೆ ಮಾಡಿ ಮತದಾನ ಮಾಡಲು ಹಾಗೂ ಇನ್ನಿತರರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಸಲಹೆ ನೀಡಿ ವಿನಂತಿಸಲಾಗಿತ್ತು.

ಆದರೂ ಕೂಡ ಮತದಾನದ ದಿನದಂದು ಕೆ.ಎಸ್.ಆರ್.ಟಿ.ಸಿ ನೌಕರರ ಸಹಕಾರ ಸಂಘ ನಿ, ವಿಜಯಪುರ ವಿಭಾಗದ ಸದಸ್ಯನಲ್ಲದ ಹೊರಗಿನ ವ್ಯಕ್ತಿ ಬಂದು ಮತದಾನ ಮಾಡಲು ಪ್ರಯತ್ನ ಮಾಡಿದ್ದ. ಆ ವ್ಯಕ್ತಿಯ ಬಗ್ಗೆ ಅನುಮಾನ ಬಂದು ಸಹಕಾರ ಸಂಘದ ಸದಸ್ಯರು ಚುನಾವಣೆ ಕೋಣೆಯಲ್ಲಿ ವಿಚಾರಿಸಿದಾಗ ಹೊರಗಿನವನು ಎಂದು ತಿಳಿದು ಬಂದಿತ್ತು.

ಬಳಿಕ ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು. ಆ ಹೊರಗಿನ ವ್ಯಕ್ತಿ ಸಹಕಾರ ಸಂಘದ ಗುರ್ತಿನ ಚೀಟಿ ಪಡೆಯಲು ಹೇಗೆ ಸಾಧ್ಯ? ಇದರ ಜತೆಗೆ 14/03/2026 ರಂದು ವಿಭಾಗದ ಸಹಕಾರ ಸಂಘದ ಸುಮಾರು 50 ರಿಂದ 60 ಚಾಲಕ ನಿರ್ವಾಹಕರು ಶ್ರೀಶೈಲಂ ಜಾತ್ರೆಗೆ ನಿಯೋಜನೆಗೊಂಡು ವಾಹನವನ್ನು ಪಡೆದುಕೊಂಡು ಅದೇ ಸಾಯಂಕಾಲ ಶ್ರೀಶೈಲಂ ಜಾತ್ರೆಗೆ ಹೋಗಿದ್ದರು.

ಈ ನಿಯೋಜನೆಗೊಂಡ ಸದಸ್ಯರ ಮತಗಳು ಕೂಡ ಚಲಾವಣೆ ಆಗಿವೆ. ಅಂದರೆ ಇವರು  ಸೇರಿದಂತೆ ಇತರ ಹಲವರ ಮತಗಳನ್ನು ಹೊರಗಿನವರು  ಸಂಘದ ಸದಸ್ಯರಲ್ಲದ ವ್ಯಕ್ತಿಗಳು ಬಂದು ಕಾನೂನು ಬಾಹಿರವಾಗಿ 90 ರಿಂದ 100 ಮತಗಳನ್ನು ಚಲಾವಣೆ ಮಾಡಿದ್ದಾರೆ ಎಂಬುವುದು ಇದರಿಂದ  ನಮಗೆ ತಿಳಿಯುತ್ತದೆ.

ಹೀಗಾಗಿ ಈ ಚುನಾವಣೆಯಲ್ಲಿ ಅಕ್ರಮ ಮತದಾನವಾಗಿದ್ದು ಪ್ರಜಾ ಪ್ರಭೂತ್ವದ ಕಗ್ಗೋಲೆ ಯಾಗಿದೆ. ಈ ಖೊಟ್ಟಿ ಮತದಾನಕ್ಕೆ ಅನುವು ಮಾಡಿಕೊಟ್ಟ ಸಂಬಂಧಿತ ಚುನಾವಣ ಅಧಿಕಾರಿ ಆರ್.ಎನ್.ಆಳೂರ ಹಾಗೂ ಸಿಬ್ಬಂದಿವರ್ಗ ಸಂಘದ ಆಡಳಿತಾಧಿಕಾರಿ ಶ್ರೀಕಾಂತ ಶಿಂಗೆ  ಹಾಗೂ ಇವರ ಸಿಬ್ಬಂದಿವರ್ಗ  ಈ ವ್ಯಕ್ತಿಗಳಿಗೆ ಗುರುತಿನ ಚೀಟಿ ನೀಡಿ ಅಕ್ರಮ ಮತದಾನಕ್ಕೆ ಅನುವು ಮಾಡಿಕೊಟ್ಟ ಆರೋಪವಿದೆ.

ಆದ್ದರಿಂದ ಕೂಡಲೆ ಇವರ ಮೇಲೆ ಚುನಾವಣೆ ಕಾಯ್ದೆಗಳ (Representation of the People Act, 1951 & Co-operative societies Act) ಉಲ್ಲಂಘಿಸಿ, ಅಕ್ರಮ ಮತದಾನಕ್ಕೆ ಸಹಾಯ ಮಾಡಿದ್ದಾರೆ ಎಂಬ ಆರೋಪದಡಿ  ಕ್ರಮ ತೆಗೆದುಕೊಳ್ಳಬೇಕು.  ಇದು ಚುನಾವಣೆ ಪ್ರಕ್ರಿಯೆಯನ್ನು ಅಪಹರಿಸುವಂತಹ ಗಂಭೀರ ಅಪರಾಧವಾಗಿದ್ದು, ಜನತೆಯ ಮತ ಹಕ್ಕನ್ನು ದುರ್ಬಳಕೆ ಮಾಡಿದ್ದು ಸ್ಪಷ್ಟವಾಗಿ ಗೋಚರವಾಗಿದೆ.

“ಈ ಸಂಬಂಧ ಈ ಎಲ್ಲರ ವಿರುದ್ಧ FIR ಮಾಡಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ವಿಚಾರಣಾ ಪೂರ್ವ ಅಮಾನತು ಮಾಡಿ ಬಳಿಕ ವಿಚಾರಣೆ ನಡೆಸಿ ವಜಾ ಮಾಡಬೇಕು. ಜತೆಗೆ ಈಗ ಆಗಿರುವ ಅಕ್ರಮ ತಡೆದು ಮರು ಮತದಾನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ ಈ ಸಂಬಂಧ  ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ವಿಜಯಪುರ ಜಿಲ್ಲಾ ನೋಂದಣಾಧಿಕಾರಿಗಳು ಸಹಕಾರ ಇಲಾಖೆ ಹಾಗೂ ಇನ್ನೂಳಿದ ಸಂಬಂಧಿಸಿದವರಿಗೆ ಆದೇಶ ನೀಡಲು ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಿಎಸ್‌ಒ ಶಾಲಿನಿ ರಜನಿಶ್‌, ಸರ್ಕಾರದ ಕಾರ್ಯದರ್ಶಿ ಸಹಕಾರ ಇಲಾಖೆಯ ಸಂಜಯ ಶೆಟ್ಟನ್ನವರ ಅವರಿಗೆ ರಾಜಶೇಖರ್ ಕೊಣ್ಣೂರು ಹಾಗೂ ಎಂ.ಎನ್.ಇಲಕಲ್ ಮನವಿ ಮಾಡಿದ್ದಾರೆ.

Megha
the authorMegha

Leave a Reply

error: Content is protected !!