ಲಾಲ್‌ಬಾಗ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ- ಕೇಂದ್ರದ ಬಗ್ಗೆ ಅಸಮಾಧಾನ

ಬೆಂಗಳೂರು: ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಏಪ್ರಿಲ್5ರಂದು ಲಾಲ್‌ಬಾಗ್ ಆವರಣದಲ್ಲಿ ಹಮ್ಮಿಕೊಂಡಿದ್ದ ಇಪಿಎಸ್ ಪಿಂಚಿಣಿದಾರರ 99ನೇ ಮಾಸಿಕ ಸಭೆ ಯಶಸ್ವಿಯಾಗಿ ಜರುಗಿತು.

ಈ ಮಾಸಿಕ ಸಭೆಯಲ್ಲಿ ಇದುವರೆವಿಗೂ ದೇಶಾದ್ಯಂತ ಇಪಿಎಸ್ ನಿವೃತ್ತರು ನಡೆಸಿದ ಸಮಾವೇಶ, ಪ್ರತಿಭಟನಾ ಸಭೆ, ಮನವಿ ಪತ್ರ, ಪೋಸ್ಟ್ ಕಾರ್ಡ್ ಚಳವಳಿ, ಧಿಕ್ಕಾರದ ಕೂಗು, ಇವೆಲ್ಲವೂ ಕೇಂದ್ರ ಸರ್ಕಾರಕ್ಕೆ ಕಂಡರೂ, ಸರ್ಕಾರ ತನ್ನ ಜಾಣ ಕುರುಡು ಪ್ರದರ್ಶನ ನಡೆಸುತ್ತಿದೆ ಎಂಬ ಬಗ್ಗೆ ಸುದೀರ್ಘ ಚರ್ಚೆಯಾಯಿತು.
ಅಲ್ಲದೆ ಪಾರ್ಲಿಮೆಂಟ್ ಬಜೆಟ್ ಅಧಿವೇಶನದ ಕೊನೆಯ ದಿನ ಕೇಂದ್ರ ಸರ್ಕಾರದ ಜವಾಬ್ದಾರಿಯುತ ವಿತ್ತ ಸಚಿವರು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಸಚಿವರು ಇಪಿಎಸ್ ನಿವೃತ್ತರ ಮೂಲಭೂತ ಬೇಡಿಕೆ 7,500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಗಮನಹರಿಸದೆ, ಕೇವಲ ಸಾಂತ್ವಾನದ ಮಾತುಗಳನ್ನಾಡುವ ಮೂಲಕ ಮುಗ್ಧ ಇಪಿಎಸ್ ನಿವೃತ್ತರನ್ನು ಅಕ್ಷರಶಃ ಕಡೆಗಣಿಸಿದ್ದಾರೆ ಎಂಬ ಅಸಮಾಧಾನದ ಕೂಗೂ ಕೇಳಿ ಬಂದಿತು.
ಇನ್ನು ನಾವು ಇದಕ್ಕೆಲ್ಲ ಅಂತಿಮ ಹಾಡುವ ಕಾಲ ಸನ್ನಿಹಿತವಾಗುತ್ತಿದೆ. ಅಧಿಕಾರ, ಹಣ, ಅಂತಸ್ತು ಯಾವುದು ಶಾಶ್ವತವಲ್ಲ. “ಕಾಲಾಯ ತಸ್ಮೈ ನಮಃ” ಸಮಯವೇ ಎಲ್ಲವನ್ನೂ ಕಲಿಸುತ್ತದೆ, ಸಮಯವೇ ಎಲ್ಲವನ್ನೂ ತಿಳಿಸುತ್ತದೆ. ನಮ್ಮನ್ನು ನಿರ್ಲಕ್ಷಿಸುವವರಿಗೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ, ತಾಳ್ಮೆಯಿಂದ ಕಾಯಬೇಕು. ಈ ಹೋರಾಟವನ್ನು ಹೇಗೆ ಪರಿಣಾಮಕಾರಿಯಾಗಿ ನಡೆಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸಿ, ನಿರ್ಣಯಿಸುವ ಬಗ್ಗೆ ನಿರ್ಧರಿಸಲಾಯಿತು.
ಈ ನಡುವೆ ಅಧಿಕ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ, ಪ್ರವೀಣ್ ಕೊಹ್ಲಿ ಅವರು, ತಮ್ಮ ವೆಬ್ ಸೈಟ್‌ನಲ್ಲಿ ಪ್ರಕಟಿಸಿರುವಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪುನ್ನು ಇಪಿಎಫ್ಒ ಅಧಿಕಾರಿಗಳು ಅನುಷ್ಠಾನಗೊಳಿಸದೆ ಇರುವ ಬಗ್ಗೆ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ ಸಾವಿರಾರು ಇಪಿಎಸ್ ನಿವೃತ್ತರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಉಚ್ಚ ನ್ಯಾಯಾಲಯಗಳು ಪರಾಮರ್ಶಿಸಿ, ನೀಡುತ್ತಿರುವ ಆದೇಶಗಳು ಇಪಿಎಸ್ ನಿವೃತ್ತರ ಪರವಾಗಿದ್ದು, ಇದೆಲ್ಲವನ್ನು ತಾವೆಲ್ಲರೂ ಕಾಣಬಹುದು.
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿಯೂ ಸಹಾ ಈ ರೀತಿಯ ಸುಮಾರು ಐದು ಸಾವಿರ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ. 2014ರ ನಂತರ ನಿವೃತ್ತರಾದ ಇಪಿಎಸ್ ನಿವೃತ್ತರಿಗೆ ಸಂಬಂಧಿಸಿದಂತೆ, ಇಂದಲ್ಲ ನಾಳೆ ಅಧಿಕ ಹೆಚ್ಚುವರಿ ಪಿಂಚಣಿ, ಜಯ ಶತಸಿದ್ಧ ಎಂದು ಪಿಂಚಿಣಿದಾರರು ಅಚಲವಾಗಿ ನಂಬಿಕೆ ಇಟ್ಟಿರುವುದಾಗಿ ಘೋಷಣೆ ತಿಳಿಸಿದರು.
ಈ ಮಾಸಿಕ ಸಭೆಯನ್ನು ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು. ಸಂಘದ ಖಜಾಂಚಿ, ಡೋಲಪ್ಪನವರು ಎಲ್ಲ ಸದಸ್ಯರನ್ನು ಸ್ವಾಗತಿಸುವ ಮೂಲಕ ಮಾಸಿಕ ಸಭೆಗೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ನ ಅಧ್ಯಕ್ಷ ಬ್ರಹ್ಮಚಾರಿಯವರು ಮಾತನಾಡಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಬಗ್ಗೆ ಸುಳಿವು ನೀಡಿದರು. ಸಂಘಟನಾ ಕಾರ್ಯದರ್ಶಿ ನಾಗರಾಜು, ಸದಸ್ಯರಾದ ವಸಂತರಾಜ್ ಸಹಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಭೆಯ ನಿರ್ವಹಣೆಯನ್ನು ಸಂಘದ ಪದಾಧಿಕಾರಿಗಳಾದ ಆರ್.ಮನೋಹರ್, ರುಕ್ಮಿಶ್ ಹಾಗೂ ಕೆ.ಕೃಷ್ಣಮೂರ್ತಿ ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದು. ಅರ್ಥಪೂರ್ಣ ಚರ್ಚೆಯೊಂದಿಗೆ ಸಭೆ ಜರುಗಿತು ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
Related









