ವಿಜಯಪಥ ಸಮಗ್ರ ಸುದ್ದಿ
ಕೋಲ್ಕತಾ: ಲಘು ಹೃದಯಸ್ತಂಭನ ದಿಂದಾಗಿ ಅ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ಪಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಸೌರವ್ ಗಂಗೂಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಇಂದು ತಮ್ಮ ಮನೆಗೆ ತೆರಳಲಿದ್ದಾರೆ ಎಂದು ವುಡ್ಲ್ಯಾಂಡ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರೂಪಾಲಿ ಬಸು ತಿಳಿಸಿದ್ದಾರೆ.
48 ವರ್ಷದ ಗಂಗೂಲಿ ಅವರ ಆರೋಗ್ಯದ ಕುರಿತು ಸುದ್ದಿಗಾರರರಿಗೆ ಮಾಹಿತಿ ನೀಡಿದ ಅವರು, ’ ವೈದ್ಯರ ಒಂದು ತಂಡವು ಗಂಗೂಲಿ ಅವರ ಆರೋಗ್ಯದ ಬಗ್ಗೆ ಅವರ ನಿವಾಸದಲ್ಲಿಯೇ ನಿಗಾ ವಹಿಸುತ್ತದೆ. 2-3 ವಾರಗಳ ಬಳಿಕ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆಗೆ ಸಿದ್ಧರಾಗಲಿದ್ದಾರೆ‘ ಎಂದು ತಿಳಿಸಿದ್ದಾರೆ.
ಗಂಗೂಲಿ ಅವರಿಗೆ ಕಳೆದ ಶನಿವಾರ ಲಘು ಹೃದಯಸ್ತಂಭನವಾಗಿತ್ತು. ಹೀಗಾಗಿ ಕನ್ನಡಿಗ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಗಂಗೂಲಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ತಂಡವನ್ನು ಭೇಟಿ ಮಾಡಿದ್ದಾರೆ. ಗಂಗೂಲಿ ಅವರನ್ನು ತಪಾಸಣೆ ಮಾಡಿದ್ದಾರೆ.
ಲಘು ಹೃದಯಸ್ತಂಭನದಿಂದ ಅವರ ಹೃದಯಕ್ಕೆ ಹೆಚ್ಚು ಹಾನಿಯೇನೂ ಆಗಿಲ್ಲ. ಅವರು 20ನೇ ವಯಸ್ಸಿನಲ್ಲಿದ್ದಷ್ಟೇ ಆರೋಗ್ಯವಾಗಿದ್ದಾರೆ. ತಮ್ಮ ಎಂದಿನ ಜೀವನಶೈಲಿಗೆ ಬಹುಬೇಗ ಮರಳಲಿದ್ದಾರೆ‘ ಎಂದು ದೇವಿಶೆಟ್ಟಿ ತಿಳಿಸಿದ್ದಾರೆ.