ವಿಜಯಪಥ ಸಿನಿಸುದ್ದಿ
ಬೆಂಗಳೂರು: ವಂಚನೆಯ ಆರೋಪದ ಮೇಲೆ ಸೆರೆಯಾಗಿರುವ ಯುವರಾಜ್ ಎಂಬುವರಿಗೂ ತಮಗೂ ಸಿನಿಮಾ ಬಗ್ಗೆ ಬಿಟ್ಟರೆ ಇತರ ಯಾವುದೇ ಹಣಕಾಸಿನ ಸಂಬಂಧವಿಲ್ಲ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟಡಿಸಿದ್ದಾರೆ.
ರಾಜಕೀಯ ನಾಯಕರ ಹೆಸರು ಹೇಳಿಕೊಂಡು ಪ್ರಭಾವಿಗಳಿಗೂ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿರುವ ಯುವರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ಹೊರ ಬೀಳುತ್ತಿವೆ. ಸಿಸಿಬಿ ವಶದಲ್ಲಿರುವ ವಂಚಕ ಯುವರಾಜ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಈ ತನಿಖೆ ವೇಳೆ ನಟಿ ರಾಧಿಕಾ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಕರೆದು, ಯುವರಾಜ್ ಅವರಿಗೂ ತಮ್ಮ ಕುಟುಂಬಕ್ಕೂ ಇರುವ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಯುವರಾಜ್ ಒಬ್ಬ ಜ್ಯೋತಿಷಿಗಳು, 17 ವರ್ಷಗಳಿಂದ ಅವರ ಪರಿಚಯ ನಮ್ಮ ಕುಟುಂಬಕ್ಕೆ ಇದೆ. ಅವರು ಹೇಳುತ್ತಿದ್ದ ಭವಿಷ್ಯದ ಬಗ್ಗೆ ನಮ್ಮ ಪೋಷಕರಿಗೆ ನಂಬಿಕೆ ಇತ್ತು. ಅದನ್ನು ಹೊರತು ಪಡಿಸಿ ಅವರೊಂದಿಗೆ ಯಾವುದೇ ರೀತಿಯ ವ್ಯಾವಹಾರಿಕ ಸಂಬಂಧ ಇಲ್ಲ. ಅವರ ಬಂಧನವಾದಾಗಲೇ ತನಗೆ ತಿಳಿದಿದ್ದು ಅವರ ವಂಚನೆಯ ಆರೋಪ. ನನ್ನ ತಂದೆ ಬದುಕಿದ್ದಾಗ ಅವರು ಮನೆಗೆ ಬರುತ್ತಿದ್ದರು ಎಂದು ಹೇಳಿದರು.
ಈ ನಡುವೆ ಯುವರಾಜ್ ಅವರು ವಂಚಿಸಿದ್ದಾರೆ ಎನ್ನಲಾಗುತ್ತಿರುವ ಹಣ ರಾಧಿಕಾ ಅವರ ಖಾತೆ ಸೇರಿದೆ ಎಂದೂ ಅನುಮಾನಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ನಟಿ, ಅವರೊಂದಿಗೆ ಸಿನಿಮಾ ಮಾಡುವ ಮಾತುಕತೆಯಾಗಿತ್ತು. 2020ರ ಮಾರ್ಚ್ ನಲ್ಲಿ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಮುಂಗಡವಾಗಿ 15 ಲಕ್ಷ ರೂ. ಅವರ ಖಾತೆಯಿಂದ ನನ್ನ ಬ್ಯಾಂಕ್ ಖಾತೆಗೆ ಹಾಕಿದ್ದರು, ಮತ್ತೊಬ್ಬರ ಖಾತೆಯಿಂದ ಮತ್ತೆ 60 ಲಕ್ಷ ರೂ. ಬಂದಿದೆ. ಅದನ್ನು ಬಿಟ್ಟರೆ ಬೇರೆ ಯಾವ ವ್ಯವಹಾರವೂ ಅವರೊಂದಿಗೆ ಇಲ್ಲ ಎಂದರು.
ಆ ಸಿನಿಮಾ ಯಾವುದು ಎಂದು ಪತ್ರಕರ್ತು ಕೇಳಿದ ಪ್ರಶ್ನೆಗೆ ಅವರು, ಕಳೆದ ವರ್ಷ ನಾಟ್ಯರಾಣಿ ಶಾಂತಲೆ ಕುರಿತಾದ ಚಿತ್ರ ನಿರ್ಮಾಣದ ವಿಚಾರವಾಗಿ ಆತ ನನ್ನೊಂದಿಗೆ ಮಾತುಕತೆ ನಡೆಸಿದ್ದ. ಆದರೆ ಈ ಸಿನಿಮಾ ಆರಂಭವಾಗಲೇ ಇಲ್ಲ ಎಂದು ತಿಳಿಸಿದರು.
ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಅಣ್ಣನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಆದರೆ, ನನ್ನನ್ನು ಕರೆದಿಲ್ಲ. ಒಂದು ವೇಳೆ ಸಿಸಿಬಿ ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರೆ ನಾನು ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಯುವರಾಜ್ ಜೊತೆ ತಾವು ಹಣಕಾಸಿನ ವ್ಯವಹಾರ ನಡೆಸಿರುವ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ಹಸಿ ಸುಳ್ಳು ಮತ್ತು ಅವಕ್ಕೆ ಯಾವುದೇ ಆಧಾರವಿಲ್ಲ ಎಂದೂ ಸ್ಪಷ್ಟನೆ ನೀಡಿದರು.
ವಂಚನೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್ ಅವರ ಹೆಸರು ಕೇಳಿ ಬಂದಿದೆ. ಈ ವಿಷಯವಾಗಿ ಈ ಹಿಂದೆ ಸಿಸಿಬಿ ಪೊಲೀಸರು ರವಿರಾಜ್ ಅವರನ್ನು ಈ ಪ್ರಕರಣದ ಸಂಬಂಧ ವಿಚಾರಣೆಗೆ ಕರೆದಿದ್ದರು. ಇದೇ ಪ್ರಕರಣದಲ್ಲಿ ಈಗ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತೆ ದಾಖಲೆಗಳು ಸಿಸಿಬಿ ಪೊಲೀಸರ ಕೈ ಸೇರಿವೆ ಎನ್ನಲಾಗುತ್ತಿದೆ.