ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಎಸ್ಸೆಸ್ಸೆಲ್ಸಿ ಜೂನ್ ಮೊದಲ ವಾರದಲ್ಲೂ ಮತ್ತು ದ್ವಿತೀಯ ಪಿಯು ಪರೀಕ್ಷೆಯನ್ನು ಮೇ ಎರಡನೇ ವಾರದಲ್ಲಿ ನಡೆಸುವ ಬಗ್ಗೆ ತಾತ್ಕಾಲಿಕವಾಗಿ ನಿರ್ಧಾರ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ – ದ್ವಿತೀಯ ಪಿಯು ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರುತಿಸಿರುವ ವಿಷಯಾಂಶಗಳನ್ನು ಶಿಕ್ಷಣ ಇಲಾಖೆ ಅಂತಿಮ ಗೊಳಿಸಿದೆ. ಈ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗುವುದು. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಠ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಪರೀಕ್ಷೆಗೆ ಯಾವ ಪಠ್ಯ ಅನಗತ್ಯ, ಪಿಯುಸಿಯಲ್ಲಿ ಯಾವುದು ಬಹಳ ಅಗತ್ಯ ಎಂಬ ಬಗ್ಗೆ ಪಠ್ಯ ಪುಸ್ತಕ ರಚಿಸಿದ ತಜ್ಞರು ಎರಡು ಸುತ್ತು ಸಭೆ ನಡೆಸಿದ್ದಾರೆ. ಆಯುಕ್ತರೂ ಮೂರು ಸುತ್ತಿನ ಸಭೆ ನಡೆಸಿ ಪಠ್ಯಗಳನ್ನು ಅಂತಿಮಗೊಳಿಸಿದ್ದಾರೆ. ಅಲ್ಲದೆ, ಮುಂದಿನ ಶೈಕ್ಷಣಿಕ ವರ್ಷವನ್ನು (2021–22) ಜುಲೈ 1ರಿಂದಲೇ ಆರಂಭಿಸಲು ಉದ್ದೇಶಿಸ
ಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
9 ನೇ ತರಗತಿವರೆಗೆ ಪಠ್ಯ ಕಡಿತವಿಲ್ಲ: ಒಂದರಿಂದ ಒಂಬತ್ತನೇ ತರಗತಿವರೆಗೆ ಪಠ್ಯ ಕಡಿತಗೊಳಿಸುವ ಪ್ರಸ್ತಾಪ ಇಲಾಖೆಯ ಮುಂದೆ ಇಲ್ಲ. ಈ ಕುರಿತಂತೆ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ಅಂತಿಮಗೊಳಿಸಲಾಗಿದೆ ಎಂದರು.