Breaking NewsNEWSರಾಜಕೀಯ

ಬೆಡ್ ಬ್ಲಾಕಿಂಗ್ ದಂಧೆಯ ಸಣ್ಣಮಿಕಗಳ ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ,‌ ಸತೀಶ್ ರೆಡ್ಡಿ‌ ಅವರೇ, ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ‌ ನಡೆಸಬೇಕಾಗಿರುವುದು BBMPಯ ಅಧಿಕಾರಿಗಳ ವಿರುದ್ಧವಲ್ಲ,‌ ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ,‌ ಸಚಿವರು ಮತ್ತು ರಾಜ್ಯ ಬಿಜೆಪಿ ಶಾಸಕರು‌, ಸಂಸದರ ವಿರುದ್ಧ. ಸಣ್ಣಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಲಗಳ ರಕ್ಷಣೆಗಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಬೆಡ್‌ ಬ್ಲಾಕ್‌ ದಂಧೆ ಬಗ್ಗೆ ನಿನ್ನೆ ಸಂಸದ ತೇಜಸ್ವಿ ಸೂರ್ಯ ಅವರು ಬಹಿರಂಗ ಪಡಿಸಿದ ಹಿನ್ನೆಲೆಯಲ್ಲಿ ಇಂದು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಕೋವಿಡ್ ಪ್ರಾರಂಭದ ದಿನಗಳಲ್ಲಿಯೇ ನಾನು ಪತ್ರಿಕಾಗೋಷ್ಠಿ ನಡೆಸಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆ‌ಸಹಿತ ಬಹಿರಂಗಗೊಳಿಸಿದ್ದೆ. ಅದರ ಜೊತೆ ಈಗ ನೀವು ಹೇಳುತ್ತಿರುವುದನ್ನೂ ಸೇರಿಸಿ‌ ಹೈಕೋರ್ಟ್ ಹಾಲಿ‌ ನ್ಯಾಯಾಧೀಶರಿಂದ ತನಿಖೆ ನಡೆಸಲು ಸಿಎಂ ಮೇಲೆ ಒತ್ತಡ ಹೇರಿ ತೇಜಸ್ವಿ ಸೂರ್ಯ ಎಂದು ಹೇಳಿದ್ದಾರೆ.

ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ಬಂದು ಹತ್ತು ದಿನ ಆಯ್ತು ಅಂತೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ? ಬೇರೇನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ? ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು ತೇಜಸ್ವಿ ಸೂರ್ಯ ಎಂದು ಪ್ರಶ್ನಿಸಿದ್ದಾರೆ.

ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿಯೂ ಜಾತಿ-ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ದಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರ್ತೀರಿ ತೇಜಸ್ವಿ ಸೂರ್ಯ? ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್, ಅದಕ್ಕೆ ಚಿಕಿತ್ಸೆ ಪಡ್ಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಷಾಮೀಲಾಗಿರುವವರು ಒಂದೇ ಕೋಮಿನವರು ಎನ್ನುವ ರೀತಿಯಲ್ಲಿ ಆರೋಪಿಗಳ ಪಟ್ಟಿ ಓದಿದ ತೇಜಸ್ವಿ ಸೂರ್ಯ ಅವರೇ, ಮುಖ್ಯ ಆರೋಪಿಗಳಾದ
ಸಿಎಂ ಬಿಎಸ್‌ವೈ ಅವರಿಂದ ಹಿಡಿದು ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? ಅದನ್ನೂ ಓದಿ ಹೇಳಿಬಿಡಿ ಎಂದು ಕಾಲೆಳೆದಿದ್ದಾರೆ.

‘ಯಥಾ ರಾಜಾ ತಥಾ‌ ಮಂತ್ರಿ’. ‘ಮೈ ಬೀ ಕಾವೂಂಗಾ, ತುಮ್ ಬಿ ಕಾವೋ’ ಎನ್ನುವುದೇ ನಿಮ್ಮ ಮೋದಿ ಅವರ ನಿಜವಾದ ಘೋಷಣೆ.‌ ಅದನ್ನೇ ನೀವೆಲ್ಲ ಮಾಡ್ತಿದ್ದೀರಿ. ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೆ ಅಲ್ಲವೇ ತೇಜಸ್ವಿ ಸೂರ್ಯ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳಿಂದ ಕರ್ತವ್ಯಲೋಪ-ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪ‌ಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ-ಸಿಬ್ಬಂದಿಗಳನ್ನು‌ ಯಾಕೆ ಬಳಸಿಕೊಳ್ತೀರಿ? ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾವನ್ನು ಯಾಕೆ ಬಳಸಿಕೊಳ್ತೀರಿ ತೇಜಸ್ವಿ ಸೂರ್ಯ?

ಕೋವಿಡ್ ನಿರ್ವಹಣೆಯಲ್ಲಿ‌ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ. ನಿಮ್ಮ ಕೇಂದ್ರ ಸರ್ಕಾರ ಏನು ಕಡಿದು ಕಟ್ಟೆ ಹಾಕಿದೆ‌‌ ಅದನ್ನೂ ರಾಜ್ಯದ ಜನತೆಗೆ ತಿಳಿಸಿ ತೇಜಸ್ವಿ ಸೂರ್ಯ.

ಕೇಂದ್ರ ಮತ್ತು ರಾಜ್ಯದಲ್ಲಿ‌ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತೆ ಎಂದು ಮತದಾರರ ದಿಕ್ಕುತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ, ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರೆದಿದೆ,‌ ಸ್ಮಶಾನದಲ್ಲಿ‌ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ಮೋದಿ ಅವರ ಅಚ್ಚೇ ದಿನ್ ತೇಜಸ್ವಿ ಸೂರ್ಯ?

ಪಿಎಂ ಕೇರ್ಸ್ ನಿಧಿಗೆ ರಾಜ್ಯದಿಂದ ಎಷ್ಟು‌ ಹಣ ಸಂದಾಯವಾಗಿದೆ? ಅದರಿಂದ ರಾಜ್ಯಕ್ಕೆ ಎಷ್ಟು ನೆರವು ಹರಿದು ಬಂದಿದೆ? ರಾಜ್ಯಕ್ಕೆ ವೆಂಟಿಲೇಟರ್,‌ ಐಸಿಯು,‌ ಆಕ್ಸಿಜನ್ ಎಷ್ಟು ಸಿಕ್ಕಿದೆ? ಮಾಹಿತಿ ಹಕ್ಕಿಗೆ ನಿಷೇಧ ಹೇರಿ ಮೋದಿ ರಕ್ಷಿಸುತ್ತಿರುವುದು ಯಾರನ್ನು ತಮ್ಮನ್ನೋ? ಅಧಿಕಾರಿಗಳನ್ನೋ?

ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ,‌ ವೆಂಟಿಲೇಟರ್ ಕೊಡಿ, ಆಕ್ಸಿಜನ್ ಕೊಡಿ ಎಂದು ಬಿಎಸ್‌ವೈ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ 25 ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ? ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ಮೋದಿ ಎದುರು ಇಲಿಗಳಾಗಿ ಬಿಲ ಸೇರುವುದು ಯಾಕೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!