ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಬುಧವಾರ ತಡರಾತ್ರಿ ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.
ಕೊರೊನಾ ಸೋಂಕು ಇರುವುದು ದೃಢವಾದ ಬೆನ್ನಲ್ಲೇ ಶರ್ಮಾ ಅವರ ಕುಟುಂಬದವರು ಅವರನ್ನು ಎರಡು ದಿನಗಳ ಹಿಂದಷ್ಟೆ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಶ್ವಾಸಕೋಶದಲ್ಲಿ ಸೋಂಕು ಹೆಚ್ಚಾಗಿ ಚಿಕಿತ್ಸೆ ಫಲಕಾರಿಯಾಗದೇ ತಡ ರಾತ್ರಿ ಅಸುನೀಗಿದರು.
1981ರಲ್ಲಿ ಅನುಪಮ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿದ ರೇಣುಕಾ ಶರ್ಮಾ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. 1983ರಲ್ಲಿ ಕವಿರತ್ನ ಕಾಳಿದಾಸ, 1985ರಲ್ಲಿ ಶಹಬ್ಬಾಸ್ ವಿಕ್ರಮ್, 1986ರಲ್ಲಿ ಸತ್ಕಾರ ಹಾಗೂ ನಮ್ಮ ಊರು ದೇವತೆ, 1988ರಲ್ಲಿ ಅಂಜದ ಗಂಡು, 1989ರಲ್ಲಿ ಕಿಂದರಿ ಜೋಗಿ, 1990ರಲ್ಲಿ ಶಬರಿ ಮಲೆ ಶ್ರೀ ಅಯ್ಯಪ್ಪ, 1992ರಲ್ಲಿ ಭರ್ಜರಿ ಗಂಡು ಹಾಗೂ ಹಠಮಾರಿ ಹೆಣ್ಣು ಕಿಲಾಡಿ ಗಂಡು, 1993ರಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕೆ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಕಂಬನಿ ಮಿಡಿದ ಮಾಜಿ ಸಿಎಂ ಎಚ್‌ಡಿಕೆ
ಹಿರಿಯ ಚಿತ್ರ ನಿರ್ದೇಶಕ ರೇಣುಕಾಶರ್ಮ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕೋವಿಡ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಜೀವ ತೆತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರ ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಭರ್ಜರಿ ಗಂಡು, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.