ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೇ ಕೊನೆಯ ವಾರ ಅಥವಾ ಜೂನ್ ಮೊದಲನೇ ವಾರದಲ್ಲಿ ಕೊರೊನಾ ಎರಡನೇ ಅಲೆಯ ಪ್ರಭಾವ ಕಮ್ಮಿಯಾಗಬಹುದು ಎಂದು ಜಯದೇವ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಕಳೆದ ಮೇ 4ರಂದು ತಿಳಿಸಿದ್ದರು. ಅವರು ಹೇಳಿದಂತೆ ಕೊರೊನಾ ಪಾಸಿಟಿವಿಟಿ ರೇಟ್ ಕಡಿಯಾಗುತ್ತಿದ್ದು,ರಾಜ್ಯ ಅನ್‌ಲಾಕ್‌ನತ್ತ ಸಾಗುತ್ತಿದೆ.
ಕೊರೊನಾ ಮಹಾಮಾರಿ ರಾಜ್ಯದಲ್ಲಿ ಏಪ್ರಿಲ್, ಮೇನಲ್ಲಿ ಅಬ್ಬರಿಸಿದ್ದು ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಅದರ ಪ್ರಮಾಣ ಈಗ ಕಡಿಮೆಯಾಗುತತಿದೆ. ಹೀಗಾಗಿ ಈ ವೈರಸ್ ಬಗ್ಗೆ ಆತಂಕ ಬಿಟ್ಟು ಈಗ ಸಿಗುತ್ತಿರುವ ಎರಡೂ ವ್ಯಾಕ್ಸಿನ್‌ಗಳೂ ಉತ್ತಮವಾಗಿದ್ದು, ಅವುಗಳನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿರಿ: ಮೇ ಕೊನೇ ವಾರ ಅಥವಾ ಜೂನ್ ಮೊದಲನೇ ವಾರದಲ್ಲಿ ಕುಗ್ಗಲಿದೆ ಕೊರೊನಾ: ಡಾ.ಸಿಎನ್‌ಎಂ
ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇದ್ದ ಪಕ್ಷದಲ್ಲಿ ಮಕಾಡೆ ಮಲಗಿಕೊಂಡರೆ ಒಳ್ಳೆಯದು. ಆಗ ಶೇ.4ರಷ್ಟು ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ. ತೂಕ ಜಾಸ್ತಿ, ಹೊಟ್ಟೆ ಜಾಸ್ತಿ ಇರುವವರಿಗೆ ಇದು ಇನ್ನೂ ಅನುಕೂಲವಾಗಲಿದೆ. ಸಾಮಾಜಿಕ ತಾಣದಲ್ಲಿ ಬಹಳಷ್ಟು ತಪ್ಪು ಮಾಹಿತಿ ಹರಡುತ್ತಿದೆ. ಜನ ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ಕೊರೊನಾ ಮೊದಲನೇ ಅಲೆಯಿಂದಲೇ ಸರಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಸಲಹೆಯನ್ನು ನೀಡುತ್ತಾ ಬರುತ್ತಿರುವ ಡಾ.ಮಂಜುನಾಥ್, ಕೊರೊನಾದ ಸಣ್ಣ ಲಕ್ಷಣಗಳಿದ್ದರೆ ರೆಮ್‌ಡೆಸಿವಿರ್ ಅವಶ್ಯಕತೆಯಿಲ್ಲ. ಉಸಿರಾಟದ ತೊಂದರೆಯಾದರೂ ಭಯ ಪಡಬೇಕಾಗಿಲ್ಲ, ಹತ್ತು ದಿನ ಕ್ವಾರಂಟೈನ್‌ನಲ್ಲಿದ್ದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಧೈರ್ಯದಿಂದ ರೋಗವನ್ನು ಹೊಡೆದೋಡಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.