ವಿಜಯಪಥ ಸಮಗ್ರ ಸುದ್ದಿ
ಮಣ್ಣಿನ ಮಗ, ರೈತ ನಾಯಕ ಎಚ್. ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ 25 ವರ್ಷ. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಅವರು. ಈ ವಿಶೇಷ ಸಂದರ್ಭದಲ್ಲಿ ನಾನು ಅವರನ್ನು ಅಭಿನಂದಿಸುತ್ತೇನೆ. ದೇವೇಗೌಡರ ರಾಜಕೀಯ ಮಹಾಯಾನದ ಕುರಿತು ಹೇಳಲೇಬೇಕಾದ್ದರಲ್ಲಿ ಪ್ರಮುಖವಾದ ಕೆಲವೊಂದನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ನಾನು ಮಾಡಿದ್ದೇನೆ.
ಹೀಗೆ ಗೌಡ್ರು ಪ್ರಧಾನಿಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ನೆನಪಿನಾಳದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬರೋಬ್ಬರಿ ಒಂದು ಪುಟದ ಜಾಹೀರಾತಿನಲ್ಲಿ ಎಚ್‌ಡಿಕೆ ಬರೆದಿರುವ ಕೆಲವು ಅಂಶಗಳನ್ನು ಯಥಾವತ್ತಾಗಿ ಇಲ್ಲಿ ಪ್ರಸ್ತುತ ಪಡಿಸಿದ್ದೇವೆ.
ಜೂನ್ 1, 1996 ಇದು ಕನ್ನಡಿಗರ ಪಾಲಿಗೆ ಮಹತ್ವದ ದಿನವಾಗಿತ್ತು. ಮಣ್ಣಿನ ಮಗ ಎಂದೇ ಕರ್ನಾಟಕದಲ್ಲಿ ಕರೆಯಲ್ಪಡುವ ದೇವೇಗೌಡ್ರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಂದರೆ, ಇಂದಿಗೆ ಅವರು ಪ್ರಧಾನಿಯಾಗಿ 25 ವರ್ಷ. ಹಾಲೀ ರಾಜ್ಯಸಭಾ ಸದಸ್ಯರಾಗಿರುವ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು 01.06.1996 ರಿಂದ 21.04.1997ರ ಅವಧಿಯಲ್ಲಿ ದೇಶದ ಹನ್ನೆರಡನೇ ಪ್ರಧಾನಮಂತ್ರಿಯಾಗಿದ್ದರು. ಇದಕ್ಕೂ ಮುನ್ನ, 1994ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ವಿಧಾನಸಭೆಯಲ್ಲಿ ವಿಪಕ್ಷದ ನಾಯಕರೂ ಆಗಿದ್ದ ಗೌಡ್ರು, 1975-76ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದರು. ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದ ಗೌಡ್ರು, ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದಿದ್ದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.
1978ರ ಅಸೆಂಬ್ಲಿ ಚುನಾವಣೆಯ ವೇಳೆ ಖ್ಯಾತ ಉದ್ಯಮಿಯೊಬ್ಬರು ಹಣದೊಂದಿಗೆ ನಾವಿದ್ದ ಬಾಡಿಗೆ ಮನೆಗೆ ಬಂದಿದ್ದರು. ಚುನಾವಣೆಗೆ ಆ ಹಣವನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದರು. ದೇವೇಗೌಡ್ರು ಕ್ಷಣಕಾಲವೂ ಯೋಚಿಸದೇ, ಬಡವರ ರಕ್ತಹೀರಿ ನೀವು ಈ ದುಡ್ಡು ಸಂಪಾದನೆ ಮಾಡಿದ್ದೀರಾ. ಇದನ್ನು ತೆಗೆದುಕೊಂಡರೆ ನಿಮ್ಮ ದಾಕ್ಷಿಣ್ಯಕ್ಕೆ ಒಳಗಾಗಬೇಕಾದೀತು. ದಯಮಾಡಿ ಯಾವುದೂ ಬೇಡ, ಹೊರಡಿ ಎಂದು ಗೌಡ್ರು ಹೇಳಿದ್ದರು – ಎಚ್.ಡಿ.ಕುಮಾರಸ್ವಾಮಿ.
1996 ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ರಾಜ್ಯದಲ್ಲಿ ಹದಿನಾರು, ದೇಶದಲ್ಲಿ 44 ಸ್ಥಾನ ಗೆದ್ದಿತ್ತು. ತೃತೀಯ ರಂಗ ವೇದಿಕೆ ಸಿದ್ದವಾಗಿ ದೇವೇಗೌಡ್ರಿಗೆ ಪ್ರಧಾನಿಯಾಗುವ ಅವಕಾಶ ಸಿಕ್ಕಿತ್ತು. ಆದರೆ, ರಾಮಕೃಷ್ಣ ಹೆಗಡೆಯವರ ಹೆಸರನ್ನು ಶಿಫಾರಸು ಮಾಡಲು ನಬಿಯವರನ್ನು ಅವರ ನಿವಾಸಕ್ಕೆ ಕಳುಹಿಸಿದ್ದೆ. ಅವನ್ಯಾರೋ ಹುಡುಗ ನನ್ನತ್ರ ಏನು ಮಾತನಾಡೋದು ಎಂದು ಹೆಗಡೆಯವರು ಲೇವಡಿ ಮಾಡಿ ಕಳುಹಿಸಿದ್ದರು – ಎಚ್.ಡಿ.ಕುಮಾರಸ್ವಾಮಿ.
ಲಾಲೂ ಪ್ರಸಾದ್ ಯಾದವ್ ಒಂದು ದಿನ ರಾತ್ರಿ ದೇವೇಗೌಡ್ರ ಮನೆಗೆ ಬಂದಿದ್ದರು. ರಾಮಕೃಷ್ಣ ಹೆಗಡೆಯವರನ್ನು ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದರು. ಆದರೆ, ಗೌಡ್ರು ಅದಕ್ಕೆ ಒಪ್ಪಿರಲಿಲ್ಲ. ಆದರೆ, ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಲಾಲೂ, ಹೆಗಡೆಯವರನ್ನು ಉಚ್ಚಾಟಿಸಿದ್ದರು. ಗೌಡ್ರನ್ನು ಟೀಕಿಸುತ್ತಿರುವುದರಿಂದ ಅವರನ್ನು ಉಚ್ಚಾಟಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಹೇಳಿದ್ದರು. ಆದರೆ, ಗೌಡ್ರು ಈ ಕಳಂಕವನ್ನು ಹೊರಬೇಕಾಯಿತು – ಎಚ್.ಡಿ.ಕುಮಾರಸ್ವಾಮಿ.
ಪಿ.ಜಿ.ಆರ್ ಸಿಂಧ್ಯಾ ಮನವಿಯ ಮೇರೆಗೆ ಕರ್ನಾಟಕ ಕೇಡರಿನ ಐಪಿಎಸ್ ಅಧಿಕಾರಿ ಜೋಗಿಂದರ್ ಸಿಂಗ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಸಿಂಗ್ ಅವರು ಸ್ವಿಟ್ಜರ್ಲ್ಯಾಂಡ್ ನಿಂದ ಬಂದ ಕೂಡಲೇ, ಬೋಫೋರ್ಸ್ ಹಗರಣದ ದಾಖಲೆಯನ್ನು ತಂದಿದ್ದೇನೆ, ತನಿಖೆ ಆರಂಭಿಸಲಾಗುವುದು ಎಂದು ಹೇಳಿದರು. ಇದೇ ಕರ್ನಾಟಕದ ಸಚಿವರೊಬ್ಬರು ಕಾಂಗ್ರೆಸ್ ಮುಖಂಡ ಸೀತಾರಾಂ ಕೇಸರಿ ಅವರು ಪ್ರಕರಣವೊಂದರಲ್ಲಿ ಬಂಧನವಾಗುವುದು ಖಚಿತ ಎಂದು ಹೇಳಿದರು. ಇದು ಗೌಡ್ರ ನೇತೃತ್ವದ ಸರಕಾರ ಪತನಗೊಳ್ಳಲು ಪ್ರಮುಖ ಕಾರಣವಾಯಿತು – ಎಚ್.ಡಿ.ಕುಮಾರಸ್ವಾಮಿ.