ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುರಸಭಾ ಪೌರಕಾರ್ಮಿಕ ಸಿಬ್ಬಂದಿಗೆ ಸಿದ್ಧಾರ್ಥ ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ರಕ್ಷಣೆಗಾಗಿ ಸ್ಟೀಮರ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಮಹದೇವ್ ಮಾತನಾಡಿ, ಕೋವಿಡ್ ಮಹಾಮಾರಿ ಅತೀ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವುದಲ್ಲದೆ ಗಣನೀಯ ಸಂಖ್ಯೆಯಲ್ಲಿ ಸಾವುನೋವುಗಳು ಕಂಡು ಬಂದು ಜನರಲ್ಲಿ ಭೀತಿಯನ್ನು ಉಂಟುಮಾಡಿದೆ.
ಆದ್ದರಿಂದ ದಿನನಿತ್ಯ ತಮ್ಮ ಜೀವನದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಪೌರ ಕಾರ್ಮಿಕರ ಆರೋಗ್ಯದ ರಕ್ಷಣೆ ಬಹಳ ಪ್ರಮುಖವಾಗಿದೆ. ಪ್ರತಿಯೊಬ್ಬ ಪೌರ ಕಾರ್ಮಿಕ ಕೂಡ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು.
ಇನ್ನು ಪೌರಕಾರ್ಮಿಕ ಹಾಗೂ ಸಫಾಯಿ ಕರ್ಮಚಾರಿ ವೃತ್ತಿಯಲ್ಲಿ ತೊಡಗಿರುವ ಸಿಬ್ಬಂದಿ ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿನಿತ್ಯ ಅನೈರ್ಮಲ್ಯವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಇವರು ಪ್ರಥಮ ಕೊರೊನಾ ವಾರಿಯರ್ಸ್ ಗಳ ಪಟ್ಟಿಗೆ ಬರುತ್ತಾರೆ. ಅದರಿಂದ ಪೌರ ಕಾರ್ಮಿಕರ ರಕ್ಷಣೆ ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದರು.
ತಹಸೀಲ್ದಾರ್ ಚಂದ್ರಮೌಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಕೃಷ್ಣಕುಮಾರ್, ತಾಪಂ ಮಾಜಿ ಸದಸ್ಯ ಎ.ಟಿ.ರಂಗಸ್ವಾಮಿ, ಸಫಾಯಿ ಕರ್ಮಚಾರಿ ಮೇಲ್ವಿಚಾರಣಾ ಸಮಿತಿ ಸದಸ್ಯ ಎಚ್.ಕೆ. ಮಹೇಶ್, ಸಿದ್ಧಾರ್ಥ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಕಾಂತರಾಜು, ಕಾರ್ಯದರ್ಶಿ ಸುಧಾರಾಣಿ, ಆರೋಗ್ಯ ನಿರೀಕ್ಷಕ ಆದರ್ಶ, ಪ್ರದೀಪಕುಮಾರ್, ಮುಖಂಡರಾದ ಸೋಮಶೇಖರ್, ದೇವರಾಜು, ಅಣ್ಣಯ್ಯ ಶೆಟ್ಟಿ ಪುರಸಭಾ ನೌಕರರು ಇದ್ದರು.