ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರ ಏಳು ವರ್ಷಗಳನ್ನು ವೈಪಲ್ಯಪೂರ್ಣವಾಗಿ ಪೂರೈಸಿದೆ. ಇದನ್ನು ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಏಳು ವರ್ಷದ ಆಡಳಿತ ಏಳೇಳು ಜನ್ಮಕ್ಕೂ ಬೇಡ ಎನ್ನುವಷ್ಟು ಜನರು ಹತಾಶರಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಏಳು ವರ್ಷಗಳ ವಿಫಲ ಆಡಳಿತವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಕರಾಳ ದಿನವನ್ನು ಆಚರಣೆಯಲ್ಲಿ ಮಾತನಾಡಿ, ನೋಟ್ ಬ್ಯಾನ್, ಅವೈಜ್ಞಾನಿಕ ಜಿ.ಎಸ್.ಟಿ, ರೈತ ವಿರೋಧಿ ಕೃಷಿ ಮಸೂದೆಗಳು, ನಿರುದ್ಯೋಗ, ಕೊರೋನ ಸೋಂಕು ನಿಯಂತ್ರಣದಲ್ಲಿ ಸಂಪೂರ್ಣ ವೈಫಲ್ಯ, ಹೀಗೇ ಸಾಲು ಸಾಲು ಮೂರ್ಖ ನಿರ್ಧಾರಗಳಿಂದ ಜನತೆಯನ್ನು ಪಡಬಾರದ ಕಷ್ಟಕ್ಕೆ ಸಿಲುಕಿಸಿದ್ದೇ ನರೇಂದ್ರ ಮೋದಿಯವರ ಸಾಧನೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ಒಡೆದು ಆಳುವ ನೀತಿ ಮತ್ತು ಜನ ವಿರೋಧಿ ಯೋಜನೆಗಳನ್ನು ವಿರೋಧಿಸಿದರು.
ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಉಸ್ತುವಾರಿ ಶಾಂತಲಾ ದಾಮ್ಲೆ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ, ಅಯೂಬ್ ಖಾನ್, ಜ್ಯೋತಿಷ್ ಕುಮಾರ್, ಸಿಂಥಿಯಾ ಸ್ಟೀಫನ್, ಡಾ.ಕೇಶವ್, ಅನೀಶ್ ರತ್ನಮ್ ಮೊದಲಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜ್ಯದಾದ್ಯಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದಿನಸಿ ವಿತರಣೆ, ಆಹಾರ ವಿತರಣೆ, ಸ್ಯಾನಿಟೈಸೇಷನ್ ಮೊದಲಾದ ನೆರವಿನ ಕಾರ್ಯಕ್ರಮಗಳನ್ನು ಕಪ್ಪು ಪಟ್ಟಿ ಕಟ್ಟಿಕೊಂಡು ನಡೆಸುವ ಮೂಲಕ ಸಾಂಕೇತಿಕವಾಗಿ ಆಚರಿಸಿದರು.