
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿಗಮಗಳಿಗೆ ಹೊಸ ಹೊಸ ಬಸ್‌ಗಳನ್ನು ರಾಜ್ಯ ಸರ್ಕಾರ ಖರೀದಿಸುತ್ತಿದೆ. ಆದರೆ, ಬಸ್‌ಗಳನ್ನು ಉತ್ತರ ಕರ್ನಾಟಕ ಭಾಗದ ಸಾರಿಗೆ ನಿಗಮಗಳಿಗೂ ಬರುತ್ತವೋ ಇಲ್ಲ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಗಮಗಳಿಗಷ್ಟೇ ಸೀಮಿತವಾಗಿರುತ್ತವೋ ಎಂದು ಪ್ರಶ್ನೆ ಮಾಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸಾರಿಗೆ ಸಚಿವರ ರಾಮಲಿಂಗಾ ರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಮೂಲಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರ್ಕಾರ ಹಾಗೂ ವಿಪಕ್ಷ ನಾಯಕರ ವಾಗ್ಯುದ್ಧ ನಡೆದಿದೆ. ಮೊದಲು ಸಾರಿಗೆ ಸಚಿವರನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅರವಿಂದ ಬೆಲ್ಲದ್ ಪೋಸ್ಟ್ ಹಾಕಿದ್ದರು.
ಮಾನ್ಯ ರಾಮಲಿಂಗಾರೆಡ್ಡಿಯವರೇ, ತಮ್ಮ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ 20 ಅಂಬಾರಿ ಉತ್ಸವ ಬಸ್‌ಗಳನ್ನು ಸೇರ್ಪಡೆಗೊಳಿಸಿದಾಗ, ಒಂದೇ ಒಂದು ಬಸ್ಸನ್ನು ಕೂಡಾ ಉತ್ತರ ಕರ್ನಾಟಕಕ್ಕೆ ನೀಡಿರಲಿಲ್ಲ. ಆದರೆ, ಈಗಾಗಲೇ ಸಾರಿಗೆ ಸಂಸ್ಥೆ ದಿವಾಳಿ ಹಂತ ತಲುಪಿದ್ದರೂ 2000 ಹೊಸ ಬಸ್‌ಗಳನ್ನು ಖರೀದಿಸುವುದಾಗಿ ಘೋಷಿಸಿದ್ದೀರಿ. ಈ ಎಲ್ಲ 2000 ಬಸ್‌ಗಳು ಕೇವಲ ದಕ್ಷಿಣ ಕರ್ನಾಟಕಕ್ಕೇ ಮೀಸಲಾ? ಅಥವಾ ಇದರಲ್ಲಿ ಎಷ್ಟು ಬಸ್‌ಗಳನ್ನು ಉತ್ತರ ಕರ್ನಾಟಕದ ಸಾರಿಗೆ ಸಂಸ್ಥೆಗಳು ಪಡೆಯಲಿವೆ? ಎಂಬುದನ್ನು ಸ್ಪಷ್ಟಪಡಿಸಿ. ಎಂದಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿ 10 ಪ್ರಮುಖ ಸ್ಪಷ್ಟನೆ ಕೊಟ್ಟಿರುವ ರಾಮಲಿಂಗಾ ರೆಡ್ಡಿ ಅವರು ಅರವಿಂದ್ ಬೆಲ್ಲದ್ ಅವರೇ, ಉತ್ತರ ಕರ್ನಾಟಕದ ಬಗೆಗಿನ ತಮ್ಮ ಕಾಳಜಿಗೆ ಸ್ಪಂದಿಸುತ್ತಾ, ಈ ಕಾಳಜಿಯು ತಮ್ಮ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ತೋರಿದ್ದರೆ, ಉತ್ತರ ಕರ್ನಾಟಕದ ಜನರಿಗೆ ಸಾಕಷ್ಟು ಸಾರಿಗೆ ಸೌಲಭ್ಯವನ್ನು ನೀಡಿ, ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮಾಡಬಹುದಿತ್ತೇನೋ ಎಂದು ಹೇಳಿದ್ದಾರೆ.
ಇನ್ನು ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ನಷ್ಟಕ್ಕೆ ಸಿಲುಕಿಸಿ ಹೋಗಿರುವ ತಮ್ಮ ಪಕ್ಷದ ಬಗ್ಗೆ ಕೆಲವಷ್ಟು ಸರಿಯಾದ ಮಾಹಿತಿ ಇಟ್ಟುಕೊಳ್ಳಿ, ಟ್ಟೀಟ್ ಮಾಡಲು ಇದು ಸಹಕಾರಿಯಾಗುತ್ತದೆ. ಇಲ್ಲವಾದರೆ ಕೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಆಗುತ್ತದೆ ಎಂದ ಅವರು, ಯಡಿಯೂರಪ್ಪ , ಬೊಮ್ಮಾಯಿ ಆಡಳಿತದಲ್ಲಿ ಬಿಟ್ಟು ಹೋಗಿದ್ದ ₹5900 ಕೋಟಿ ನಷ್ಟ ಹಾಗೂ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಬಿಟ್ಟು ಹೋಗಿರುವ ತಮ್ಮ ವಿಫಲ ಆಡಳಿತದ ಭಾರವನ್ನು ಹೊತ್ತು ಸಂಸ್ಥೆಗಳನ್ನು ನಾವು ಮುನ್ನಡೆಸುತ್ತಿದ್ದೇವೆ.
2) ತಮ್ಮ ಪಕ್ಷದ ಆಡಳಿತದ ಅವಧಿಯಲ್ಲಿ ಬಿ.ಎಂ.ಟಿ.ಸಿ ಹೊರತುಪಡಿಸಿ, ಇತರೆ ಸಾರಿಗೆ ಸಂಸ್ಥೆಗಳಲ್ಲಿ ಒಂದೇ ಒಂದು ಹೊಸ ಬಸ್ ಸೇರ್ಪಡೆ ಆಗಿಲ್ಲ. ಒಂದೇ ಒಂದು ನೇಮಕಾತಿ ಮಾಡಿಲ್ಲ. 3)ಡಕೋಟ ಬಸ್ ದಯಪಾಲಿಸಿರುವ ಕೀರ್ತಿ ತಮ್ಮ ಬಿ.ಜೆ.ಪಿ ಆಡಳಿತಕ್ಕೆ ಸಲ್ಲಬೇಕು.
4)ತಮ್ಮ ಬಿ.ಜೆ.ಪಿ ಪಕ್ಷದ ಆಡಳಿತದ ಅವಧಿಯಲ್ಲಿ, ಬಿ.ಎಂ.ಟಿ.ಸಿ ಯಲ್ಲಿ ಕಾರ್ಯಾಚರಣೆಗೊಳಿಸಿ ಹಳೆಯದಾದ 100 ಬಸ್ಸುಗಳನ್ನು 2022 ರಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಕಳುಹಿಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಭಾಗದಲ್ಲಿ ಓಡಿಸಿದ್ದು ಮರೆತಿದೆಯೇ ಬೆಲ್ಲದ್ ಅವರೇ? 5) ನಮ್ಮ ಎರಡು ವರ್ಷಕ್ಕೂ ಕಡಿಮೆ ಆಡಳಿತ ಅವಧಿಯಲ್ಲಿ 4956 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಲಾಗಿದೆ.
6) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 856 ಹೊಸ ಬಸ್ಸುಗಳು ,ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 1023 ಹೊಸ ಬಸ್ಸುಗಳನ್ನು ಅಮೋಘವರ್ಷ, ಕಲ್ಯಾಣ ರಥ ಎಂಬ ವಿವಿಧ ಮಾದರಿ ಹಾಗೂ ಹೆಸರಿನಲ್ಲಿ ಕಳೆದ ಎರಡು ವರ್ಷದಲ್ಲಿ ಸೇರ್ಪಡೆಗೊಳಿಸಲಾಗಿದೆ.
7) ನೇಮಕಾತಿ ಸ್ಥಗಿತಗೊಳಿಸಿದ್ದ ತಮ್ಮ ಪಕ್ಷವು, ನಾವು ಅಧಿಕಾರಕ್ಮೆಬಂದ ಕೂಡಲೇ ಸಾರಿಗೆ ಸಂಸ್ಥೆಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, 2300 ಹುದ್ದೆಗಳಿಗೆ ಈಗಾಗಲೇ ಆದೇಶ ಪತ್ರ ನೀಡಲಾಗಿದ್ದು, 6500 ಹುದ್ದೆಗಳ ನೇಮಕಾತಿ ಪ್ರಗತಿಯಲ್ಲಿದೆ.
8) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 1609 ಚಾಲಕ/ ನಿರ್ವಾಹಕರಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿ 2000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.
9) ಸಾರಿಗೆ ಸಂಸ್ಥೆಗಳಲ್ಲಿ ಕಳೆದ ಎರಡು ವರ್ಷದಲ್ಲಿ, 1000 ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದ್ದು, ಇದರಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 223, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 207 ಅವಲಂಬಿತರಿಗೆ ಹುದ್ದೆ ನೀಡಲಾಗಿದೆ. 10) ಮುಖ್ಯಮಂತ್ರಿಗಳು ಘೋಷಿಸಿರುವುದು ಕೂಡ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳನ್ನು ಒಳಗೊಂಡಂತೆ ಎಂಬುದು ತಮಗೆ ತಿಳಿಯದಿರುವುದು ನಿಜಕ್ಕೂ ವಿಷಾದನೀಯ ಎಂದು ತಿರುಗೇಟು ನೀಡಿದ್ದಾರೆ.