
ಮುದ್ದೇಬಿಹಾಳ: ಕಾಲಿಗೆ ಹಾಗೂ ಕುತ್ತಿಗೆಗೆ ಸೀರೆ ಬಿಗಿದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಪತ್ನಿಯ ಮೃತದೇಹವಿದ್ದರೆ ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ ಮೃತದೇಹ ಪತ್ತೆಯಾಗಿರುವ ಘಟನೆ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ನಿವಾಸಿ ಸಿದ್ದಪ್ಪ ಹರನಾಳ ಹಾಗೂ ಆತನ ಪತ್ನಿ ಮೇಘಾ ಹರನಾಳ ಎಂಬುವರ ಶವಗಳೇ ಪತ್ತೆಯಾಗಿರುವುದು.
ಎಂಟು ವರ್ಷಗಳ ಹಿಂದೆ ಮೇಘಾ ಅವರನ್ನು ಸಿದ್ದಪ್ಪ ಹರನಾಳ ವಿವಾಹವಾಗಿದ್ದ. ದಂಪತಿಗೆ ಮುದ್ದಾದ ನಾಲ್ವರು ಮಕ್ಕಳಿದ್ದಾರೆ. ಆದರೆ, ಈಗ ಆ ಮಕ್ಕಳು ಅಪ್ಪ ಅಮ್ಮನ ಕಳೆದುಕೊಂಡು ಅನಾಥರಾಗಿದ್ದಾರೆ.
ಪತಿ ಸಿದ್ದಪ್ಪನೇ ಪತ್ನಿ ಮೇಘಾ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಮೇಘಾಳ ತಾಯಿ ಗದ್ದೆಮ್ಮ ಹೊಸಮನಿ ಈ ಆರೋಪ ಮಾಡಿದ್ದಾರೆ.
ಸಿದ್ದಪ್ಪನ ತಾಯಿ ಶಾಂತಮ್ಮ ಹಾಗೂ ಸಹೋದರ ಶ್ರೀಕಾಂತ ಕಿರುಕುಳವೇ ಇದಕ್ಕೆ ಕಾರಣ ಎಂದು ಗದ್ದೆಮ್ಮ ದೂರಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಸಿದ್ದಪ್ಪ ಹಾಗೂ ಮೇಘಾಳ ಸಂಸಾರದಲ್ಲಿ ಆಗಾಗ ಜಗಳವಾಗುತ್ತಿತ್ತು. ನಡುವೆ ರಾಜಿ ಪಂಚಾಯಿತಿ ಮಾಡಿ ಚೆನ್ನಾಗಿರಿ ಎಂದು ಹೇಳಿದ್ದೆವು. ಈಗ ನಮ್ಮ ಮಗಳನ್ನು ಕೊಲೆ ಮಾಡಿ ಅಳಿಯ ನೇಣಿಗೆ ಶರಣಾಗಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನಾಲ್ವರು ಮಕ್ಕಳನ್ನು ಈಗ ಅನಾಥರನ್ನಾಗಿ ಮಾಡಿ ಹೋಗಿದ್ದಾರೆ ಎಂದು ಮೇಘಾಳ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ದಂಪತಿಯ ಜಗಳ ಇಬ್ಬರ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ಹೋಗಿರುವುದು ಮಾತ್ರ ಭಾರಿ ನೋವು ತರುತ್ತಿದೆ ಎಂದು ಗೋಳಾಡುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಬಾಲಣ್ಣ ನಂದಗಾವಿ ಹಾಗೂ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದ ಘಟನೆಯ ಕುರಿತು ಸತ್ತಾಂಶ ಹೊರಬೀಳಬೇಕಿದೆ.
ಇನ್ನು ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಮೃತದೇಹಗಳನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.