
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಿಗೆ ಸಂಚಾರ ವ್ಯವಸ್ಥೆ ಸಮಸ್ಯೆಗಳ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಬಿ.ನಾಗರಾಜು ನೇತೃತ್ವದ ಅಧಿಕಾರಿಗಳೊಂದಿಗೆ ಶಾಸಕ ಎಚ್.ಟಿ.ಮಂಜು ಸಮಾಲೋಚನಾ ಸಭೆ ನಡೆಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಶಾಸಕರ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಶಾಸಕರು ತಾಲೂಕಿನ ವಿವಿಧೆಡೆ ಸಾರಿಗೆ ಬಸ್ ಸಂಚಾರ ವ್ಯವಸ್ಥೆಯ ಮಾಹಿತಿ ಪಡೆದರು. ಅಲ್ಲದೆ ಈಗ ಪರೀಕ್ಷಾ ಸಮಯವಾಗಿದ್ದು ಶಾಲಾ ಕಾಲೇಜುಗಳ ಮಕ್ಕಳಿಗೆ ಉಂಟಾಗಿರುವ ಬಸ್ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ಕಲಿಯಲು ಪಟ್ಟಣದ ಶಾಲಾ ಕಾಲೇಜುಗಳಿಗೆ ನಿತ್ಯ ಬರುತ್ತಾರೆ. ವಿದ್ಯಾರ್ಥಿಗಳಲ್ಲದೆ ಸಂತೆ ವ್ಯಾಪಾರ ಸೇರಿದಂತೆ ತಮ್ಮ ದೈನಂದಿನ ವ್ಯವಹಾರಗಳಿಗೆ ರೈತ ಸಮುದಾಯವೂ ಪಟ್ಟಣಕ್ಕೆ ಬಂದು ಹೋಗುತ್ತದೆ. ರೈತರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಸಮಯದಲ್ಲಿ ಬಸ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದಲ್ಲಿ ಬಸ್ ಡಿಪೋ ಇದ್ದರೂ ಗ್ರಾಮೀಣ ಸಾರಿಗೆ ವ್ಯವಸ್ಥೆ ನಿರ್ವಹಣೆ ಸಮರ್ಪಕವಾಗಿಲ್ಲ. ಅಗತ್ಯ ಇರುವ ಮಾರ್ಗಗಳಲ್ಲಿ ಬಸ್ ರೂಟ್ ಹೆಚ್ಚಿಸುವಂತೆ ಸೂಚನೆ ನೀಡಿದ ಶಾಸಕರು ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ ಮತ್ತು ಸಾಯಂಕಾಲ ರೂಟ್ ಆಪರೇಟ್ ಮಾಡುವಂತೆ ತಾಕೀತು ಮಾಡಿದರು.
ಕೆ.ಆರ್.ಪೇಟೆ – ಹರಿಹರಪುರ, ಮಡುವಿನಕೋಡಿ ಮಾರ್ಗವಾಗಿ ಬೂಕನಕೆರೆ, ಕೆ.ಆರ್.ಪೇಟೆ, ಎತ್ತುಗೋನಹಳ್ಳಿ, ಕೆ.ಆರ್.ಪೇಟೆ, ಕಿಕ್ಕೇರಿ – ಸಾಸಲು ಮಾರ್ಗವಾಗಿ ಶ್ರವಣಬೆಳಗೊಳ, ಕೆ.ಆರ್.ಪೇಟೆ, ಚಿಕ್ಕಗಾಡಿಗನಹಳ್ಳಿಗೆ ಹೊಸ ಬಸ್ ರೂಟ್ ಆಪರೇಟ್ ಮಾಡುವುದಾಗಿ ಸಭೆಯಲ್ಲಿ ಸಾರಿಗೆ ಸಂಸ್ಥೆಯ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ತಿಳಿಸಿದರಲ್ಲದೆ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಬರುವ ಮಾದಾಪುರ ಗೇಟ್ ಬಳಿ ವೇಗದೂತ ಬಸ್‍ಗಳ ನಿಲುಗಡೆಗೆ ಕ್ರಮವಹಿಸುವುದಾಗಿ ತಿಳಿಸಿದರು.
ವಿಭಾಗೀಯ ಸಂಚಾರ ನಿಯಂತ್ರಣಧಿಕಾರಿ ಪರಮೇಶ್ವರಪ್ಪ, ಕೆ.ಆರ್.ಪೇಟೆ ಬಸ್ ಡಿಪೋ ವ್ಯವಸ್ಥಾಪಕಿ ವನಿತಾ, ಸಂಚಾರ ನಿಯಂತ್ರಕ ರವಿ ಮುಖಂಡರಾದ ತಾ.ಪಂ.ಮಾಜಿ ಸದಸ್ಯ ಮಾಂಬಳ್ಳಿ ಅಶೋಕ್, ಸಂತೆಬಾಚಹಳ್ಳಿ ರವಿ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಮುಖಂಡರು ಭಾಗವಹಿಸಿದ್ದರು.