NEWSಶಿಕ್ಷಣ

ಅಮ್ಮನ ಅಗಲಿಕೆ ಅಜ್ಜಿಯ ನಿಧನದ ದುಃಖದಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ವಿಜಯಪಥ ಸಮಗ್ರ ಸುದ್ದಿ

ಗದಗ/ಕೊಪ್ಪಳ: ಇಂದು ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ (SSLC Exam) ಆರಂಭವಾಯಿತು. ಈ ಸಂದರ್ಭದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಪರೀಕ್ಷೆ ದಿನವೇ ಅಮ್ಮನ ಕಳೆದುಕೊಂಡ ವಿದ್ಯಾರ್ಥಿ  ಹಾಗೂ ಅಜ್ಜಿಯ ಅಗಲಿಕೆಯ ದುಃಖದಲ್ಲೇ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾರೆ.

ಮೊದಲನೆಯದಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ನಿವಾಸಿ, ಡಂಬಳದ ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ಜಲಜಾಕ್ಷಿ ಕಿಲಾರಿ ವಿದ್ಯಾರ್ಥಿನಿಯ ಅಜ್ಜಿ ವಯೋಸಹಜವಾಗಿ ನಿಧನರಾಗಿದ್ದಾರೆ. ಇದು ಎಸ್ಸೆಸ್ಸೆಲ್ಸಿ  ಕನ್ನಡ ವಿಷಯದ ಪರೀಕ್ಷೆ ಬರೆಯಲು ಸಿದ್ಧಳಾಗಿದ್ದ ವಿದ್ಯಾರ್ಥಿನಿಗೆ ದುಖಃ ತಂದಿದೆ.

ನಿಧನದಿಂದಾಗಿ ಪರೀಕ್ಷೆ ಬರೆಯಲು ಭಯದಲ್ಲಿದ್ದ ಜಲಜಾಕ್ಷಿಗೆ ಪಾಲಕರು, ಶಾಲೆಯ ಶಿಕ್ಷಕರು ಮತ್ತು ಅವಳ ಸಹಪಾಠಿಗಳು ಧೈರ್ಯ ತುಂಬಿದ್ದಾರೆ. ಶಿಕ್ಷಕಿ ಶ್ರೀಮತಿ ಎ.ಬಿ ಬೇವಿನಕಟ್ಟಿ, ಸಂಜುತ ಸಂಕಣ್ಣವರ್, ಶ್ರೀಮತಿ ಎಸ್ಎಂ ಹಂಚಿನಾಳ, ಬುದಪ್ಪ ಅಂಗಡಿ, ಎಸ್​.ಎಸ್. ತಿಮ್ಮಾಪುರ್, ಎಂ.ಎಂ.ಗೌಳೆರ ಎಲ್ಲ ಶಿಕ್ಷಕರು ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಅಜ್ಜಿಯ ಪಾರ್ಥಿವ ಶರೀರಕ್ಕೆ ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಬಂದು ಎದೆಯಲ್ಲಿ ದುಃಖ ತುಂಬಿಕೊಂಡೇ ಧೈರ್ಯದಿಂದ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಾಳೆ.

ತಾಯಿಯ ಅಗಲಿಕೆಯ ನೋವಿನ ಮಧ್ಯೆಯೂ ಪರೀಕ್ಷೆ ಬರೆದ: ಇನ್ನು ಗಂಗಾವತಿ (ಕೊಪ್ಪಳ)ದಲ್ಲಿ ಹೊತ್ತು – ಹೆತ್ತವ್ವನ ಪ್ರೀತಿ, ಮಮತೆಗೆ ಬೆಲೆ ಕಟ್ಟಲಾಗದು. ಮಕ್ಕಳ ವಿಚಾರಕ್ಕೆ ಬಂದರೆ ಎಂಥ ತ್ಯಾಗಕ್ಕಾದರೂ ತಾಯಿ ಸಿದ್ಧಳಿರುತ್ತಾಳೆ. ಅಂತಹ ತಾಯಿಯ ಅಗಲಿಕೆಯ ನೋವಿನ ಮಧ್ಯೆಯೂ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ಘಟನೆ ತಾಲೂಕಿನ ಕೇಸರಹಟ್ಟಿಯಲ್ಲಿ ನಡೆದಿದೆ.

ಗ್ರಾಮದ ಸ್ವಾಮಿ ವಿವೇಕಾನಂದ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಡಿವೆಯ್ಯ ಸ್ವಾಮಿ ಎಂಬ ಹತ್ತನೇ ತರಗತಿಯ ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ (38) ಶುಕ್ರವಾರ ಬೆಳಗಿನ ಸಮಯದಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ಸುದ್ದಿಯ ಮಧ್ಯೆಯೂ ಧೃತಿಗೆಡದ ವಿದ್ಯಾರ್ಥಿ ತನ್ನ ಕುಟುಂಬದವರ ಮನವೊಲಿಸಿ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದ.

ವಿದ್ಯಾರ್ಥಿ ಮನೆಗೆ ಬಂದ ಶಿಕ್ಷಕರು: ನೋವಿನಲ್ಲಿದ್ದ ವಿದ್ಯಾರ್ಥಿ ಅಡಿವೆಯ್ಯ ಸ್ವಾಮಿ ಮನೆಗೆ ಬಂದ ಶಿಕ್ಷಕರು ಸಾಂತ್ವಾನ ಹೇಳಿದರು. ಬಳಿಕ ಪರೀಕ್ಷಾ ಕೇಂದ್ರದವರೆಗೆ ಕರೆದೊಯ್ಯಲು ನೆರವಾದರು. ಪರೀಕ್ಷೆಯ ಬಳಿಕ ವಿದ್ಯಾರ್ಥಿ ತನ್ನ ತಾಯಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ.

ವಿದ್ಯಾರ್ಥಿ ತಾಯಿ ವಿಜಯಲಕ್ಷ್ಮಿ ಕೆಲ ದಿನಗಳ ಹಿಂದೆ ಸ್ನಾನದ ಕೋಣೆಯಲ್ಲಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು. ಪರಿಣಾಮ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Deva
the authorDeva

Leave a Reply

error: Content is protected !!