
ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕನ ಮೇಲೆ ಕೇಳಿದ ಸ್ಥಳದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮಚ್ಚಿನಿಂದ ಇಬ್ಬರು ಹಲ್ಲೆ ಮಾಡಿರುವ ಘಟನೆ ತಾಲೂಕಿನ ಇರಸವಾಡಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕೃಷ್ಣಶೆಟ್ಟಿ ಮತ್ತು ಪುಟ್ಟಸ್ವಾಮಿ ಎಂಬುವರು ಹಲ್ಲೆ ಮಾಡಿದ್ದು, ಇದರಿಂದ ಬಸ್ ಚಾಲಕ ವಿಜಯಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಇರಸವಾಡಿಯಲ್ಲಿ ಬಸ್ ನಿಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಈ ವ್ಯಕ್ತಿಗಳಿಬ್ಬರು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು ಚಾಲಕ ತೀವ್ರ ರಕ್ತಸ್ರಾವವಾಗುತ್ತಿದ್ದರು ಒಬ್ಬನನ್ನು ಹಿಡಿದುಕೊಂಡಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಯಳಂದೂರು ಪೊಲೀಸರು ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಬಸ್‌ನಲ್ಲಿ ಪ್ರಯಾಣಿಸುವ ಜನರು ಈ ರೀತಿ ಸಾರ್ವಜನಿಕ ಸೇವೆ ಮಾಡುತ್ತಿರುವ ನೌಕರರ ಮೇಲೆ ಹಲ್ಲೆ ಮಾಡಿದರೆ ಶಿಕ್ಷೆಗೊಳಗಾಗಬೇಕಾಗುತ್ತದೆ ಎಂಬುವುದು ಗೊತ್ತಿದ್ದರೂ ಈ ರೀತಿ ನಡೆದುಕೊಳ್ಳುತ್ತಿರುವುದು ಭಾರಿ ಅಚ್ಚರಿಯನ್ನುಂಟು ಮಾಡುತ್ತಿದೆ.
ಇನ್ನೊಂದೆಡೆ ಕೆಲವರು ಸಾರಿಗೆ ಬಸ್ ಚಾಲನಾ ಸಿಬ್ಬಂದಿಯನ್ನು ಒಂದು ರೀತಿ ಅಸಡ್ಡೆಯಿಂದ ನೋಡುತ್ತಾರೆ. ಜತೆಗೆ ಇವರ ಮೇಲೆ ಹಲ್ಲೆ ಮಾಡಿದರೂ ಏನು ಆಗುವುದಿಲ್ಲ ಎಂಬ ಭಂಡ ಧೈರ್ಯದಿಂದ ಈ ರೀತಿಯ ಹಲ್ಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಈ ಇಂಥ ಹಲ್ಲೆ ಕೋರರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಅಲ್ಲದೆ ನಮ್ಮ ನೌಕರರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸಂಸ್ಥೆಯ ಅಧಿಕಾರಿಗಳೂ ಸೂಕ್ತರೀತಿಯ ಕಾನೂನು ಕ್ರಮ ಜರುಗಿಸಿದರೆ ಇಂಥ ಘಟನೆಗಳು ನಡೆಯುವುದಿಲ್ಲ. ಆದರೆ, ಅಧಿಕಾರಿಗಳು ನೌಕರರ ವಿರುದ್ಧವೇ ಹೆಚ್ಚಾಗಿ ಪ್ರಕರಣ ದಾಖಲಿಸುವ ಮನಸ್ಥಿತಿಯವರಾಗಿರುವುದರಿಂದ ಹಲ್ಲೆಕೋರರಿಗೆ ಇದು ವರವಾಗುತ್ತಿದೆ. ಹೀಗಾಗಿ ಇದು ಬದಲಾಗಬೇಕು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.