ಮೈಸೂರು: ರಾಜ್ಯದಲ್ಲಿ ಇಂದು ಒಟ್ಟು 5 ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ನಿಗಾದಲ್ಲಿದ್ದ 35 ವರ್ಷದ ವ್ಯಕ್ತಿ ಒಬ್ಬರಾಗಿದ್ದಾರೆ. ಈ ವ್ಯಕ್ತಿ ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಶುಕ್ರವಾರ ದುಬೈನಿಂದ ಬೆಂಗಳೂರಿಗೆ ಬಂದು ನಂತರ ಟ್ಯಾಕ್ಸಿಯಲ್ಲಿ ಮೈಸೂರಿಗೆ ಬಂದ ವ್ಯಕ್ತಿ ಮನೆಗೆ ಹೋಗದೆ ನೇರವಾಗಿ ಕೆ.ಆರ್.ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ದುಬೈನಿಂದ ಏರ್ ಇಂಡಿಯಾ – 19 ಫ್ಲೈಟ್ನಲ್ಲಿ ಬಂದಿದ್ದು ಆತನ ರೂಟ್ ಮ್ಯಾಪ್ ಸಿಕ್ಕಿಲ್ಲ. ರಾತ್ರಿ 11.30ಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಮನೆಗೂ ತೆರಳದೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ವ್ಯಕ್ತಿಯ ಸ್ವ್ಯಾಪ್ ಸ್ಯಾಂಪಲ್, ಸ್ಕ್ರೀನಿಂಗ್ ಮಾಡಿದ ಮೇಲೆ ಕೊರೊನಾ ಇರುವುದು ದೃಢವಾಗಿದೆ. ಅಲ್ಲದೇ ಕೆ.ಆರ್.ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಅವರನ್ನು ಚೆಕ್ ಮಾಡಿದ ವೈದ್ಯರ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಇನ್ನು ಫ್ಲೈಟ್ ನಲ್ಲಿದ್ದ ಪ್ಯಾಸೆಂಜರ್ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಏರ್ ಇಂಡಿಯಾ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇವೆ. ಅವರು ಒಬ್ಬರೇ ಬಂದಿರುವ ಕುರಿತು ಮಾಹಿತಿ ಸಿಕ್ಕಿದೆ. ಟ್ಯಾಕ್ಸಿ ಡ್ರೈವರ್ ಸಹ ಬೆಂಗಳೂರು ಮೂಲದ ಎಂದು ಮಾಹಿತಿ ಇರುವುದಾಗಿ ತಿಳಿಸಿದರು.
ಈವರೆಗೂ ಮೈಸೂರಿನಲ್ಲಿ ನಿಗಾದಲ್ಲಿ ಒಟ್ಟು 240 ಮಂದಿಯಿದ್ದು, ಮನೆಯಲ್ಲಿ ನಿಗಾದಲ್ಲಿ 170, ಇಬ್ಬರು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 14 ದಿನ ನಿಗಾ ಮುಗಿಸಿದವರು 69 ಜನ. ಒಟ್ಟು 31 ಮಂದಿ ಸ್ಯಾಂಪಲ್ನಲ್ಲಿ ಒಬ್ಬರದು ಪಾಸಿಟಿವ್ ಆಗಿದೆ ಎಂದರು.
ಬಹಳ ಎಚ್ಚರಿಕೆತಯಿಂದಿರಿ
ಜನರಿಗೆ ನಮ್ಮೂರಿನಲ್ಲಿ ಕೊರೊನಾ ಬರುವುದಿಲ್ಲ ಎಂಬ ಭಾವನೆಯಿದೆ. ಈ ವಿಷಯದಲ್ಲಿ ಸೀರಿಯಸ್ ಆಗಬೇಕು. ಮತ್ತೆ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಸೇರಬೇಡಿ. ಇನ್ನು, ದುಬೈನಿಂದ ಬಂದ ವ್ಯಕ್ತಿಯನ್ನು ಮೊದಲು ತಪಾಸಣೆ ಮಾಡಿದ ಕೆ.ಆರ್.ಆಸ್ಪತ್ರೆಯ ವೈದ್ಯರನ್ನು ಪ್ರತ್ಯೇಕವಾಗಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶನಿವಾರ 5 ಪ್ರಕರಣ ಪತ್ತೆ
ಒಂದೇ ದಿನ ರಾಜ್ಯದಲ್ಲಿ 5 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಬೆಂಗಳೂರಿನ ಮೂವರು, ಗೌರಿಬಿದನೂರಿನ ಒಬ್ಬರು, ಮೈಸೂರಿನ ಒಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇನ್ನು, ಗೌರಿಬಿದನೂರಿನ ವ್ಯಕ್ತಿ ತಾಯಿಗೂ ಸೋಂಕು ಇರುವ ಬಗ್ಗೆ ಅನುಮಾನವಿದೆ. ಹೀಗಾಗಿ ಬೆಂಗಳೂರಿನ ಲ್ಯಾಬ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಸರ್ಕಾರ ಪುಣೆಯ ಲ್ಯಾಬ್ ವರದಿ ಕಾಯುತ್ತಿದೆ. ಒಂದು ವೇಳೆ ಅವರ ತಾಯಿಗೂ ಸೋಂಕು ದೃಢವಾದರೆ ಪೀಡಿತರ ಸಂಖ್ಯೆ ರಾಜ್ಯದಲ್ಲಿ 21ಕ್ಕೆ ಏರಿಕೆಯಾಗಲಿದೆ.