ನಾಗಮಂಗಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕನನ್ನು ವರ್ಗಾವಣೆ ಮಾಡಿಸುವ ಮೂಲಕ ದ್ವೇಷ ರಾಜಕೀಯ ಮಾಡುತ್ತಿರುವ ಸಚಿವ ಚಲುವರಾಯಸ್ವಾಮಿ ಅವರ ಕಿರುಕುಳಕ್ಕೆ ಬೇಸತ್ತು ಘಟಕದಲ್ಲೇ ವಿಷ ಸೇವಿಸಿ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಗಮಂಗಲ ಡಿಪೋನಲ್ಲಿ ನಡೆದಿದೆ.
ನಾಗಮಂಗಲ ಘಟಕದ ಎಚ್.ಆರ್.ಜಗದೀಶ್ ಆತ್ಮ ಹತ್ಯೆಗೆ ಯತ್ನಿಸಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಕಂ ನಿರ್ವಾಹಕ.
ಸಚಿವ ಚಲುವರಾಯಸ್ವಾಮಿ ನಿರ್ವಾಹಕ ಜಗದೀಶ್ ಅವರನ್ನು ವರ್ಗಾವಣೆ ಮಾಡುವಂತೆ ಮೌಖಿಕ ಅದೇಶ ನೀಡಿದ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗಮಂಗಲದಿಂದ ಮದ್ದೂರು ಘಟಕಕ್ಕೆ ವರ್ಗಾವಣೆ ಮಾಡಿದ್ದಾರೆ.
ಆ ವರ್ಗಾವಣೆ ಆದೇಶದ ಪ್ರತಿಯನ್ನು ನಾಗಮಂಗಲ ಘಟಕದ ವ್ಯವಸ್ಥಾಪಕರು ಜಗದೀಶ್ ಅವರಿಗೆ ಕೊಟ್ಟಿದ್ದಾರೆ. ಆದರೆ, ಇದು ದ್ವೇಷದಿಂದ ಮಾಡಿರುವ ವರ್ಗಾವಣೆ ನಾನು ಈ ಡಿಪೋ ಬಿಟ್ಟು ಹೋಗುವುದಿಲ್ಲ ಎಂದು ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ವಿಷ ಸೇವಿಸುತ್ತಿದ್ದಂತೆ ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಕ್ಕೆ ಅಲ್ಲಿನ ಸಿಬ್ಬಂದಿಗಳು ಮುಂದಾದರು. ಆದರೆ, ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂದು ಹಠ ಮಾಡಿದ್ದಾರೆ. ಕೊನೆಗೆ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿಕ, ತೀವ್ರ ಅಸ್ವಸ್ಥಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಚಿವ ಚೆಲುವರಾಯಸ್ವಾಮಿ ದ್ವೇಷದ ರಾಜಕಾರಣ ಮಾಡುತ್ತಾರೆ ನಾಗಮಂಗಲ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನನ್ನು ರಾಜಕೀಯ ದ್ವೇಷದಿಂದ ಮದ್ದೂರಿಗೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ.
ಈ ಘಟನೆ ಸಂಬಂಧ ಕೆಎಸ್‌ಆರ್‌ಟಿಸಿ ಘಟಕದ ಸಹಾಯಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ನಾಗಮಂಗಲ ಘಟಕದಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ಅವರ ವಿರುದ್ಧ ಕಳೆದ ವಾರ ಪ್ರಯಾಣಿಕರು ಸಚಿವ ಚೆಲುವರಾಯಸ್ವಾಮಿ ಅವರ ಬಳಿ ದೂರು ನೀಡಿದ್ದರು.
ಆ ದೂರಿನ ಹಿನ್ನೆಲೆಯಲ್ಲಿ ಸಚಿವರು ಆತನನ್ನು ವರ್ಗಾವಣೆ ಮಾಡಿ ಎಂದು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಈ ಸಂಬಂಧ ವರ್ಗಾವಣೆ ಆದೇಶದ ಪ್ರತಿ ನೀಡಲು ತೆರಳಿದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದರು.
ಕಾಂತಪುರ ಗ್ರಾಮ ಪಂಚಾಯಿತಿಯ ಹಂದೇನಹಳ್ಳಿ ಗ್ರಾಮದ ಕಂಡಕ್ಟರ್ ಜಗದೀಶ್ ಅವರ ಪತ್ನಿ ಪಾವನಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಜೆಡಿಎಸ್ ಪಕ್ಷದ ಸುರೇಶಗೌಡ ಬೆಂಬಲಿಗರಾಗಿದ್ದಾರೆ. ಇದೀಗ ವರ್ಗಾವಣೆ ಮತ್ತು ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಒಬ್ಬ ಸಚಿವರಾಗಿ ಚೆಲುವರಾಯಸ್ವಾಮಿ ಇಂಥ ದ್ವೇಷ ರಾಜಕೀಯಕ್ಕೆ ಇಳಿಯಬಾರದು ಒಬ್ಬ ನಿರ್ವಾಹಕನ ಮೇಲೆ ಇವರು ದರ್ಪ ತೋರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಸಚಿವರಿಗೆ ಚೀಮಾರಿ ಹಾಕುತ್ತಿದ್ದಾರೆ. ಇನ್ನಾದರೂ ತಮ್ಮ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ಸಚಿವರು ನಡೆದುಕೊಳ್ಳಬೇಕು. ಜತೆಗೆ ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.