ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯದ ನಾಗಮಂಗಲ KSRTC ಘಟಕದ ಚಾಲಕ ಕಂ ನಿರ್ವಾಹಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದೆ.
ನಿನ್ನೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗದೀಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ, ಜಗದೀಶ್ನನ್ನು ತಡ ರಾತ್ರಿ ಮೈಸೂರಿನ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಭೇಟಿ ನೀಡಿ, ಚಾಲಕ ಕಂ ನಿರ್ವಾಹಕ ಜಗದೀಶ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ವೈದ್ಯರು ಏನಂದ್ರು?: ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳಲು ಇನ್ನು ಸಾಧ್ಯವಿಲ್ಲ. ಬದುಕಿಸುವ ಪ್ರಯತ್ನ ಮಾತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಬುಧವಾರ (ಜು.5) ಮಂಡ್ಯದ ನಾಗಮಂಗಲದ KSRTC ಬಸ್ ಡಿಪೋನಲ್ಲಿ ಜಗದೀಶ್ ವಿಷ ಸೇವಿಸಿದ್ದರು. ಕೃಷಿ ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ಅಧಿಕಾರಿಗಳು ಜಗದೀಶ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಆ ವರ್ಗಾವಣೆ ಮಾಡಿದ್ದಕ್ಕೆ ನೊಂದು ಡಿಪೋದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದರು.
ಇತ್ತ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ತಂದೆ ಜೆಡಿಎಸ್ ಪರ ನಿಂತಿದ್ದಕ್ಕೆ ವರ್ಗಾವಣೆ ಶಿಕ್ಷೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೃಷಿ ಸಚಿವರು ಈ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.