ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಹೇಳುತ್ತಾ ಈ ಬಜೆಟ್ಟನ್ನು ರಾಜಕೀಯ ಗಾಳವನ್ನಾಗಿ ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಬಿ.ಟಿ. ನಾಗಣ್ಣ ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರಿಗೂ ಸಮಪಾಲು ಸಮ ಬಾಳು ಎಂದು ಪದೇಪದೇ ಸಾರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023/ 24ರ ಈ ಬಜೆಟ್ ಅನ್ನು ತಮ್ಮನ್ನು ತಾವು ಬಸವಣ್ಣ ಹಾಗೂ ಶ್ರೀಕಂಠ ದತ್ತ ಒಡೆಯರ್ ಅವರ ಪಳೆಯುಳಿಕೆ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜರಿದರು.
ಇನ್ನು ತನ್ನ 14 ಬಜೆಟ್ಗಳ ಮೂಲಕ ಸಾಮಾಜಿಕ ಸುಧಾರಣೆಯೊಂದಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದೇನೆಂದು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಸಾಬೀತು ಆಗುವಂತಿದೆ. ಚಲನಚಿತ್ರಗಳಲ್ಲಿ ನಾಯಕ ನಟನನ್ನು ವೈಭವಿಕರಿಸುವಂತೆ ತನ್ನನ್ನು ತಾನು ವೈಭವಿಕರಿಸಿಕೊಳ್ಳಲು ಈ ಬಜೆಟ್ಟನ್ನು ಉಪಯೋಗಿಸಿಕೊಳ್ಳುತ್ತಿರುವುದು ಎದ್ದು ಕಾಣುತ್ತದೆ ಎಂದರು.
ಈ ವರ್ಷದ ರಾಜಸ್ವ ಸಂಗ್ರಹ 2,38,409 ಕೋಟಿ ರೂಪಾಯಿಗಳ ನಿರೀಕ್ಷೆ ಇದೆ ಎಂದು ಹೇಳುತ್ತಾ, 3, 27,747 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿರುವುದು ತೀರ ಅವಾಸ್ತವ ಹಾಗೂ ಖೋತ ಬಜೆಟ್ ಎಂಬುದು ಸಾಬೀತಾಗುತ್ತಿದೆ. 89, 337 ಸಾವಿರ ಕೋಟಿ ವಿತ್ತೀಯ ಕೊರತೆ ಇರುವಂತಹ ಈ ಬಜೆಟ್ ರಾಜ್ಯದ ಜನತೆಗೆ ಮಣ್ಣೆರೆಚುವಂತಹ ಸಂಪೂರ್ಣ ಖೋತ ಬಜೆಟ್ ಆಗಿರುತ್ತದೆ ” ಎಂದು ಬಿಟಿ ನಾಗಣ್ಣ ತಿಳಿಸಿದರು.
ರಾಜ್ಯದ ಸಾಲದ ಬಡ್ಡಿಹೊರೆಯನ್ನು ಕಳೆದ ವರ್ಷ 29 ಸಾವಿರ ಕೋಟಿ ರೂ. ಇದ್ದದ್ದನ್ನು ಈ ವರ್ಷ 34 ಸಾವಿರ ಕೋಟಿ ರೂ.ಗೆ ಏರಿಸಿರುವುದು ಬಡ್ಡಿ ರಾಮಯ್ಯ ನವರ ಈ ಬಜೆಟ್ ವಿಶೇಷ ಎಂದು ವ್ಯಂಗ್ಯವಾಡಿದರು.
ತಮ್ಮ ಐದು ಗ್ಯಾರಂಟಿ ಯೋಜನೆಗಳಿಗಾಗಿ 52,000 ಕೋಟಿ ರೂಪಾಯಿಗಳ ಆರ್ಥಿಕ ಕ್ರೋಡೀಕರಣಕ್ಕಾಗಿ ಎಲ್ಲಿಯೂ ಪ್ರಸ್ತಾಪ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಅನಗತ್ಯ ದುಂದು ವೆಚ್ಚಗಳು, ತೆರಿಗೆ ಸೋರಿಕೆ ತಡೆಗಟ್ಟುವುದನ್ನು ಬಿಟ್ಟು ಅನವಶ್ಯಕವಾಗಿ ಆಸ್ತಿ, ವಾಹನಗಳ ಮೇಲಿನ ಮುದ್ರಾಂಕ ಶುಲ್ಕ 14 % ಗಳಿಗೆ ಹೆಚ್ಚಿಸಿ, ಆಸ್ತಿಗಳ ಮೇಲಿನ ಗೈಡ್ಲೈನ್ಸ್ ವ್ಯಾಲ್ಯೂ ಹೆಚ್ಚಿಸುವ ಮೂಲಕ ಹಾಗೂ ಅಬಕಾರಿ ಸುಂಕದ ಮೇಲೆ 20 % ರಷ್ಟು ಹೆಚ್ಚಿಸಿ ಬಡ ಹಾಗೂ ಮಧ್ಯಮ ವರ್ಗದ ಜನತೆಯ ಮೇಲೆ ಚಾಟಿ ಬೀಸುತ್ತಿರುವುದು ಕಳವಳಕಾರಿ ಎಂದು ನಾಗಣ್ಣ ಹೇಳಿದರು.
ಈ ಬಜೆಟ್ ನ 37ನೇ ಅಂಶದಲ್ಲಿ ಇಂಧನ ಇಲಾಖೆಯ 91,000 ಕೋಟಿ ಸಾಲದಲ್ಲಿ ಸಿಲುಕಿದೆ ಎಂದು ಪ್ರಸ್ತಾಪವಾಗಿದೆ. ರಾಜ್ಯ ಸರ್ಕಾರವೇ ಸ್ವತಹ ವಿದ್ಯುತ್ ಶಕ್ತಿ ಪ್ರಸರಣ ನಿಗಮಗಳಿಗೆ 31 ಸಾವಿರ ಕೋಟಿ ರೂಪಾಯಿಗಳ ಬಾಕಿ ಉಳಿಸಿಕೊಂಡಿರುವುದು ಹಾಗೂ ಇವುಗಳ ತಿರುವಳಿಗಾಗಿ ಯಾವುದೇ ಪ್ರಸ್ತಾಪ ಈ ಬಜೆಟ್ ನಲ್ಲಿ ಇಲ್ಲ. ಹಾಗಾಗಿ ವಿದ್ಯುತ್ ಪ್ರಸರಣ ನಿಗಮಗಳನ್ನು ಸಾಯಿಸಿ ಸಂಪೂರ್ಣ ಖಾಸಗೀಕರಣಗೊಳಿಸುವ ಹುನ್ನಾರದ ವಾಸನೆ ಈ ಬಜೆಟ್ ನಲ್ಲಿ ಬಡಿಯುತ್ತಿದೆ.
14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಈ ಬಾರಿ 89, 337 ರೂ.ಗಳನ್ನು ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವುದೇ ಈ ಬಜೆಟ್ ನ ವಿಶೇಷ. ಈ ಮೂಲಕ ಸಾಲ ರಾಮಯ್ಯ ಎಂದು ಸಹ ಹೆಸರುವಾಸಿಯಾಗುತ್ತಿದ್ದಾರೆ ಎಂದು ನಾಗಣ್ಣ ವ್ಯಂಗ್ಯವಾಡಿದರು.
” ಬಡ ಮಕ್ಕಳ ಸರ್ಕಾರಿ ಶಿಕ್ಷಣ ವ್ಯವಸ್ಥೆಗಾಗಿ ಪ್ರತಿಯೊಂದು ರಾಜ್ಯಗಳು ರಾಷ್ಟ್ರೀಯ ಸರಾಸರಿ 15 % ಮೀಸಲು ಇಡುವುದು ಸಾಮಾನ್ಯ ಸಂಗತಿ.ಆದರೆ ರಾಜ್ಯದಲ್ಲಿ ಮಾತ್ರ 47 ಸಾವಿರ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಕೇವಲ 850 ಕೋಟಿಯ ಪ್ರಕಾರ 0. 016 % ನಷ್ಟು ಮೀಸಲಿಟ್ಟಿರುವುದು ಕಾಂಗ್ರೆಸ್ ಪಕ್ಷವು ಪರಂಪರಾನುಗತ ಶಿಕ್ಷಣ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ವಾಸ್ತವದಲ್ಲಿ ಸಿದ್ದರಾಮಯ್ಯನವರು 2013-14 ರ ತಮ್ಮ 1,17,000 ಕೋಟಿ ರೂಪಾಯಿ ಬಜೆಟ್ ನಲ್ಲಿ 18 ಸಾವಿರ ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ಅಂದೆ ಮೀಸಲು ಇಟ್ಟಿದ್ದರು. ಈ ಪ್ರಕಾರ ಈ ಬಾರಿಯ ಬಜೆಟ್ ನಲ್ಲಿ 47 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕಿತ್ತು. ಈ ಅಂಶವು ಸಹ ಕಾಂಗ್ರೆಸ್ ಶಿಕ್ಷಣ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ ” ಎಂದು ನಾಗಣ್ಣ ಸುದ್ದಿಗಾರರೊಂದಿಗೆ ತಿಳಿಸಿದರು.
ಕಾಂಗ್ರೆಸ್ ಪಕ್ಷವು ಐದು ಗ್ಯಾರೆಂಟಿಗಳ ಬಗ್ಗೆ ಮಾತ್ರ ಮಾತನಾಡುತ್ತಿದೆ. ಇವುಗಳ ಪುಗಸಟ್ಟೆ ಪ್ರಚಾರಕ್ಕಾಗಿ ಈ ಸಾಲಿನ ಬಜೆಟ್ಟನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರೇ ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತಹ ಹಳೆಯ ಪಿಂಚಣಿ ಯೋಜನೆ ಜಾರಿ, ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಸಾಲ ಮನ್ನ, ಅಂಗನವಾಡಿ ಮಹಿಳೆಯರಿಗೆ ಗೌರವ ಧನ ಹೆಚ್ಚಳದ ಬಗ್ಗೆ ಈ ಬಜೆಟ್ ನಲ್ಲಿ ಎಲ್ಲೂ ಪ್ರಸ್ತಾಪ ಮಾಡಿಲ್ಲ.
ಪ್ರತಿ ಜಿಲ್ಲೆಗಳಲ್ಲಿಯೂ ಒಂದೊಂದು ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಬೇಕೆಂಬುದು ಸರ್ಕಾರದ ಇತ್ತೀಚಿನ ನೀತಿಯಾಗಿದೆ. ಆದರೆ ಈ ಬಜೆಟ್ ನಲ್ಲಿ ಈ ಬಗ್ಗೆ ಎಲ್ಲೂ ಪ್ರಸ್ತಾಪವನ್ನೇ ಮಾಡದಿರುವುದು ಕಾಂಗ್ರೆಸ್ ಪಕ್ಷವು ಬಡವರ ಆರೋಗ್ಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಹಾಗೂ ಬಡವರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
ಹಿಂದುಳಿದ ವರ್ಗಗಳ ಸಾಮಾಜಿಕ ಹರಿಕಾರ ಎಂದು ತಮ್ಮನ್ನು ತಾವೇ ಬಿಪ್ಪಿಸಿಕೊಳ್ಳುವ ಸಿದ್ದರಾಮಯ್ಯನವರು ಹಿಂದುಳಿದ ಜಾತಿಗಳ ಆರ್ಥಿಕ ಸುಧಾರಣೆಗಾಗಿ ಈ ಬಜೆಟ್ ನಲ್ಲಿ ಎಲ್ಲಿಯೂ ಸಹ ಪ್ರಸ್ತಾಪ ಮಾಡದಿರುವುದು ದುರಂತದ ವಿಚಾರ. ಹಿಂದುಳಿದ ಅನೇಕ ಜಾತಿಗಳಿಗೆ ಮುಖ್ಯಮಂತ್ರಿಗಳು ತಮ್ಮ ಈ ಹಿಂದಿನ ಅಧಿಕಾರವಧಿಯಲ್ಲಿ ವಿವಾದಗ್ರಸ್ತ ಜಮೀನುಗಳನ್ನು ಮಂಜೂರು ಮಾಡಿದ್ದರು.
ಇಂದಿಗೂ ಸಹ ಈ ಜಮೀನುಗಳು ಹಿಂದುಳಿದ ವರ್ಗಗಳಿಗೆ ಉಪಯೋಗಕ್ಕೆ ಬಾರದೆ ನೆನೆಗುದಿಯಲ್ಲಿ ಬಿದ್ದಿದೆ. ಈ ವರ್ಗಗಳಿಗೆ ಬದಲಿ ಜಮೀನುಗಳನ್ನು ಮಂಜೂರು ಮಾಡುವ ಯಾವ ವಿಚಾರವು ಸಹ ಈ ಬಜೆಟ್ ನಲ್ಲಿ ಇಲ್ಲದಿರುವುದು ವಾಸ್ತವದಲ್ಲಿ ಹಿಂದುಳಿದ ಜಾತಿಗಳ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಬಿ.ಟಿ. ನಾಗಣ್ಣ ಕಳವಳ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ನಾಗಣ್ಣ, ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಾದ ಪೆರಿಫೆರಲ್ ರಿಂಗ್ ರಸ್ತೆ, ಮೋನೋ ರೈಲು, ಟ್ರಾಫಿಕ್ ನಿರ್ವಹಣೆ, ಕೆರೆ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳ ಅನುಷ್ಠಾನಕ್ಕೆ ಯಾವುದೇ ಅಗತ್ಯ ಅನುದಾನಗಳನ್ನು ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗಾಗಿ ಕೇವಲ ರೂ.1000 ಕೋಟಿ ಮೀಸಲಿಟ್ಟಿರುವುದು ಮತ್ತಷ್ಟು ವರ್ಷಗಳ ಕಾಲ ವಿಳಂಬವಾಗುವುದಕ್ಕೆ ಕಾರಣವಾಗಿದೆ.
ಈಗಾಗಲೇ ಬಿಬಿಎಂಪಿ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ 9000 ಕೋಟಿ ರೂಪಾಯಿಗಳ ಅನುದಾನ ಪ್ರಸ್ತಾಪವೇ ಇಲ್ಲ. ಡಿ.ಕೆ. ಶಿವಕುಮಾರ್ ಪರಿಕಲ್ಪನೆಯ ಬ್ರಾಂಡ್ ಬೆಂಗಳೂರು ಯೋಜನೆಗಾಗಿ ಕೇವಲ 45 ಕೋಟಿ ರೂಪಾಯಿಗಳನ್ನು ಮಾತ್ರ ಮೀಸಲಿಟ್ಟಿರುವುದು ತೀರ ಅಪಮಾನಕಾರಿ ಆದಂತಹ ಸಂಗತಿ ” ಎಂದು ಬಿಟಿ ನಾಗಣ್ಣ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಗಳ ಪ್ರಸ್ತಾಪ ಮಾಡಿದ್ದಾರೆಯೇ ಹೊರತು ಯಾವುದೇ ಬಿಡಿಗಾಸು ಅನುದಾನವನ್ನು ಸಹ ಬಿಡುಗಡೆ ಮಾಡದಿರುವುದು ತೀವ್ರ ಕಳವಳಕಾರಿಯಾದಂತಹ ಸಂಗತಿ ಎಂದು ತಿಳಿಸಿದರು.
ಯುವಕರಿಗೆ ಉದ್ಯೋಗ ಸೃಷ್ಟಿಯ ಬಗ್ಗೆ ಯಾವುದೇ ವಿಶೇಷ ಯೋಜನೆಗಳು ಈ ಬಜೆಟ್ ನಲ್ಲಿ ಇಲ್ಲ. ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಉಪಯೋಗವಾಗುವಂತಹ ಯಾವುದೇ ಅಂಶಗಳು ಈ ಬಜೆಟ್ ನಲ್ಲಿ ಕಾಣುತ್ತಿಲ್ಲ ಎಂದು ತಿಳಿಸಿದರು.