ಬೆಳಗಾವಿ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ 15 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಬೆಳಗಾವಿ ವಿಭಾಗದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ 15ಕ್ಕೆ 15 ಮಂದಿಯೂ ನೌಕರರ ಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದು, ಕಳೆದ 30 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬರುತ್ತಿದ್ದ ಮಹಾಮಂಡಲಕ್ಕೆ ಮರ್ಮಾಘಾತ ನೀಡಿದ್ದಾರೆ.
ಕೂಟದ ಮುಖಂಡರು ಒಂದು ವಾರದಿಂದ ಅಲ್ಲೇ ವಾಸ್ತವ್ಯ ಹೂಡಿ ತಮ್ಮ ಅಭ್ಯರ್ಥಿಗಳ ಪರ ಮತ ಪ್ರಚಾರ ಮಾಡಿದರು. ಅದೇ ರೀತಿ ಮಹಾಮಂಡಲದ ಮುಖಂಡರು ಮತ ಪ್ರಚಾರ ಮಾಡಿದರು. ಆದರೂ ಅವರ ಪರ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಮತದಾರರು ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ವಿಭಾಗದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಆಡಳಿತ ಮಂಡಲಿಯ ಸಾಮಾನ್ಯ ಚುನಾವಣೆಯ ಮತ ಎಣಿಕೆ ಮುಕ್ತಾಯದ ನಂತರ, ಚುನಾವಣೆಯಲ್ಲಿ ಸ್ಪರ್ಧಿಸಿದ ಈ ಎಲ್ಲ ಅಭ್ಯರ್ಥಿಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆಂದು ಸಂಘದ ರಿಟರ್ನಿಂಗ್ ಅಧಿಕಾರಿಯಾದ ರವೀಂದ್ರ ಪಿ. ಪಾಟೀಲ ಘೋಷಿಸಿದ್ದಾರೆ.
ಚುನಾಯಿತ ಅಭ್ಯರ್ಥಿಗಳು: ಶಂಕರ ಈರಪ್ಪ ಕುಪಸ್ತ, ಸುರೇಶ ರಾಮಲಿಂಗಪ್ಪ ವಕ್ಕುಂದ, ಶಶಿಕಾಂತ ಅಶೋಕ ಬಡಿಗೇರ, ಮುಲ್ತಾನಿ ಕಾಶೀಮಾಸಾಬ, ಮಲ್ಲಿಕಾರ್ಜುನ ಸುಭಾಶ ಸಜ್ಜನ, ಬಸವರಾಜ ವೆಂಕಪ್ಪ ಲಗಳಿ, ಪಾಟೀಲ ಶಶಿಕಾಂತ ನಿಂಗನಗೌಡಾ, ಸೋಮಲಿಂಗಪ್ಪ ನಾಗಪ್ಪ ಬಾಗೋಡಿ, ಅಡಿವೆಪ್ಪಾ ಶಂಕರ ಗುಡದಿ ಆಯ್ಕೆಯಾಗಿದ್ದಾರೆ.
ಇನ್ನು ಮಹಿಳಾ ಮೀಸಲು ಕ್ಷೇತ್ರದಿಂದ ಸುಜಾತಾ ಪೋಪಟ ಚಾಂಬಾರ, ಭಾಗೀರತಿ ರಾಮಚಂದ್ರ ಕಂಕಣವಾಡಿ. ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರದಿಂದ ಸಿದ್ದಲಿಂಗಪ್ಪ ಸಿದ್ದಪ್ಪ ಕರೇಗಾರ, ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ ಸಾಗರ ಶಾಂತಿನಾಥ ಕಾಡಾಪೂರ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಾರುತಿ ಗುರುಸಿದ್ದಪ್ಪ ದಿನ್ನಿಮನಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಿದರಾಯಿ ಪುಂಡಲೀಕ ಶೀಗಿಹಳ್ಳಿ ಅವರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ರವೀಂದ್ರ ಪಿ.ಪಾಟೀಲ ಘೋಷಣೆ ಮಾಡಿದ್ದಾರೆ.
ಈ 15 ಮಂದಿ ಚುನಾಯಿತ ನಿರ್ದೇಶಕರು ಮುಂದಿನ 5 ವರ್ಷಗಳವರೆಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಚುನಾವಣೆಯಲ್ಲಿ ನೌಕರರ ಕೂಟದ ಪರವಾಗಿ ಮತ ಚಲಾಯಿಸಿದ ಬೆಳಗಾವಿ, ಚಿಕ್ಕೋಡಿ, ಧಾರಾವಾಡ ವಿಭಾಗದ ಸಮಸ್ತ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕೂಟದ ಪದಾಧಿಕಾರಿಗಳು ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.