ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಂದರೆ, ಜು. 17 ಮತ್ತು 18ರಂದು ನಡೆಯಲಿರುವ ಯುಪಿಎ ವಿಪಕ್ಷಗಳ ಸಭೆಗೆ ಆಗಮಿಸುತ್ತಿರುವ ವಿಪಕ್ಷದ ನಾಯಕರನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ವಾಗತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಿರಂಕುಶ ಪ್ರಭುತ್ವವನ್ನು ರಾಷ್ಟ್ರದಿಂದ ಹೊಡೆದೋಡಿಸುವ ನಿಟ್ಟಿನಲ್ಲಿ ರಾಷ್ಟ್ರದ ವಿಪಕ್ಷಗಳೆಲ್ಲ ಒಂದುಗೂಡಿ ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸದಾ ಕೈ ಜೋಡಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಯು ಈ ರಾಷ್ಟ್ರದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಂದಾಗಿ ಹೋರಾಟ ಮಾಡುವ ವೇದಿಕೆಯಾಗಲಿದ್ದು, ಈ ಮೂಲಕ ಮೋದಿ ಪ್ರಭುತ್ವವನ್ನು ರಾಷ್ಟ್ರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಬಿತ್ತಿದ ಬೀಜ, ಬೆಳೆದು ಫಲ ನೀಡಲಿ: ಇನ್ನು ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಕೂಡ ತಿಳಿಸಿದ್ದಾರೆ.
ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ ಎಂದು ತಿಳಿಸಿದ್ದಾರೆ.