ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸಿದ್ದರಾಮಯ್ಯ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್ನಿಂದ ಹೊರಬಂದು ಒಂದು ಪಕ್ಷಕಟ್ಟಿ ಕೇವಲ ಐದೇ ಐದು ಸ್ಥಾನ ಗೆದ್ದು ತೋರಿಸಲಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಹಿರಂಗ ಸವಾಲ್ ಹಾಕಿದ್ದಾರೆ.
ಇಂದು (ಸೋಮವಾರ ಜು.17) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದು, 123 ಸೀಟು ಬರದಿದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಎಂದು ಮಾತಾಡಿದ್ದಾರೆ. ಆದರೆ, ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ ಎಂದು ಪ್ರಶ್ನಿಸಿದ ಎಚ್ಡಿಕೆ, ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.
ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದರೆ ಪಕ್ಷ ವಿಸರ್ಜನೆ ಮಾಡುತ್ತೀನಿ ಅಂತ. ಆದರೆ, 123 ಸ್ಥಾನ ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು.
ಆದರೆ, 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10 ಸ್ಥಾನಕ್ಕೆ ಬಂದಿದ್ವಿ. ಅವರೂ ಸೋತಿದ್ದರು. ಆ ಬಳಿಕ ನಾನು ಏಕಾಂಗಿಯಾಗಿ 40 ಸ್ಥಾನಕ್ಕೆ ರೀಚ್ ಆಗಿದ್ದೇನೆ. ಹೀಗಾಗಿ ಸಿದ್ದರಾಮಯ್ಯರಿಂದ ಪಕ್ಷ ಕಟ್ಟೋದು ಹೇಳಿಸಿಕೊಳ್ಳಬೇಕಾಗಿಲ್ಲ. ಇವರು ಹಲವು ಭಾಗ್ಯ ಕೊಟ್ಟು ಸಾಧನೆ ಮಾಡಿದ್ದಾರೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮತ್ತೊಮ್ಮೆ ಗುಡುಗಿದ್ದಾರೆ.
ಬಿಜೆಪಿಯವರೇ ವಿಪಕ್ಷ ನಾಯಕರಾಗಲಿ:
ನನಗೆ ವಿಪಕ್ಷ ನಾಯಕನ ಆಸೆ ಇಲ್ಲ. ಜನರು ಕೊಟ್ಟ ಸ್ಥಾನದಲ್ಲಿ ಕೂರಲು ನಾನು ಸಿದ್ದ. ಹೀಗಾಗಿ ನಾನು ವಿಪಕ್ಷ ಸ್ಥಾನ ಕೊಡಿ ಅಂತ ಕೇಳಲ್ಲ. ಬಿಜೆಪಿಯಲ್ಲಿ ಅನೇಕ ನಾಯಕರು ಸಮರ್ಥರಿದ್ದಾರೆ. ಅವರಲ್ಲಿ ಒಬ್ಬರನ್ನು ವಿಪಕ್ಷ ನಾಯಕನನ್ನಾಗಿ ಮಾಡಿ ಅಂತ ಸಲಹೆ ಮಾಡುತ್ತೇನೆ. ಬಿಜೆಪಿ ನಾಯಕರೇ ವಿಪಕ್ಷದ ನಾಯಕರಾಗಲಿ. ಈ ಬಗ್ಗೆ ನಾನೇ ಮನವಿ ಮಾಡುತ್ತೇನೆ ಎಂದರು.
ಎನ್ಡಿಎ ಜತೆಗಿನ ಮೈತ್ರಿ ವಿಚಾರ ಮಾತನಾಡಿದ ಎಚ್ಡಿಕೆ, ಎನ್ಡಿಎ ಸಭೆಗೆ ಕರೆದರೆ ಹೋಗುತ್ತೇನೆ. ನಾನು ಕೇಂದ್ರದ ಸ್ಥಾನವನ್ನು ಕೇಳಿಲ್ಲ. ಕೇಂದ್ರ ಸಚಿವ ಸ್ಥಾನ, ವಿಪಕ್ಷ ಸ್ಥಾನ ನನಗೆ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡೋದಿಲ್ಲ. ಸೀಟಿನ ಬಗ್ಗೆ ಡಿಮ್ಯಾಂಡ್ ಆಗಿಲ್ಲ. ಸಭೆಗೆ ಕರೆದರೆ ಗೌರವ ಕೊಟ್ಟು ಹೋಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಇನ್ನು ಕೇಂದ್ರದ ಬಿಜೆಪಿ ನಾಯಕರು ಕರೆದರೆ ಹೋಗಿ ಮಾತನಾಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಜತೆಗೆ ಹೋಗೋ ಬಗ್ಗೆ ಆಹ್ವಾನ ಬಂದರೆ ಹೋಗಿ ಚರ್ಚೆ ಮಾಡುತ್ತೇನೆ ಎಂದು ಮೈತ್ರಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅಲ್ಲದೇ ಎನ್ಡಿಎ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೂ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ನಾನು ಹೋಗೋದಿಲ್ಲ ಎಂದರು.