
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಜ್ರ ಬಸ್‌ಗಳಲ್ಲಿ ಇನ್ನು ಮುಂದೆ ದೃಷ್ಟಿದೋಷವುಳ್ಳವರು (ಅಂಧ) ಅಂಧರ ಪಾಸಿನೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಇದೇ ಏ.24ರಂದು ಆದೇಶ ಹೊರಡಿಸಿದ್ದು, ಈ ಆದೇಶ ಪೂರ್ಣ ಅಂಧರಾಗಿದ್ದು(Total blindness) ಅಂಧರ ಉಚಿತ ಪಾಸು ಪಡೆದಿರುವ ಪಾಸುದಾರರರಿಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಸಂಸ್ಥೆಯ ಸಾಮಾನ್ಯ ಮತ್ತು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದುವರಿದು, ಸಂಸ್ಥೆಯ ಸೇವೆಗಳಲ್ಲಿ ವಿಕಲಚೇತನರಿಗೆ ಆಸನಗಳನ್ನು ಮೀಸಲಿರಿಸಿದೆ ಎಂದೂ ತಿಳಿಸಿದ್ದಾರೆ.
ಸಾಮಾನ್ಯ ಸೇವೆಗಳಲ್ಲಿ ವಾಹನದ ಮುಂಬಾಗಿಲಿನ ಕಿಟಕಿಯ ಎಡಭಾಗದ ಒಂದು ಅಸನವನ್ನು ಹಾಗೂ ಹಿಂಭಾಗದ/ ಮಧ್ಯದ ಬಾಗಿಲಿನ ಹಿಂಬಾಗಿಲಿನ ಕಿಟಕಿಯ ಪಕ್ಕದ ಒಂದು ಆಸನವನ್ನು ಮೀಸಲಿರಿಸಲಾಗಿದೆ.
ಅದರಂತೆ ವಜ್ರ ವಾಹನಗಳಲ್ಲಿ ಮಧ್ಯದ ಬಾಗಿಲಿನ ಎದುರಿಗಿರುವ (ಮಡಿಚುವಂತಹ) ಎರಡು ಅಸನಗಳನ್ನು (ಸುಲಭವಾಗಿ ಹತ್ತಿ ಇಳಿಯಲು ಅನುಕೂಲವಾಗುವಂತೆ) ವಿಕಲಚೇತನರಿಗೆ ಮೀಸಲಿರಿಸಲಾಗಿದ್ದು ಈ ಸಂಬಂಧ ನಿಗಮದ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಮ್ಮ ಎಲ್ಲ ಚಾಲನಾ ಸಿಬ್ಬಂದಿಗಳಿಗೂ ಸೂಕ್ತ ತಿಳಿವಳಿಕೆ ನೀಡುವುದರ ಜತೆಗೆ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ ಎಲ್ಲ ವಲಯದ ವಿಭಾಗೀಯ ಸಂಚಾರ ಅಧಿಕಾರಿಗಳು, ಎಲ್ಲ ಹಿರಿಯ/ ಘಟಕ ವ್ಯವಸ್ಥಾಪಕರು ಕೂಡ ಚಾಲನಾ ಸಿಬ್ಬಂದಿಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ಒದಗಿಸುವುದು ಹಾಗೂ ಸಾರ್ವಜನಿಕ ಪ್ರಯಾಣಿಕರೊಂದಿಗೆ ವಿಶೇಷವಾಗಿ ಅಂಧರು, ವಿಕಲಚೇತನರು ಮತ್ತು ವಿದ್ಯಾರ್ಥಿಗಳೊಂದಿಗೆ ಸೌಜನ್ಯಯುತವಾಗಿ ವರ್ತಿಸಲು ತಿಳಿವಳಿಕೆ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
