ಯಾದಗಿರಿ: ಜಿಲ್ಲೆಯಲ್ಲಿ ಮೂರು ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ವಡಗೇರಾ ತಾಲೂಕಿನ ಬೆಂಡಬೆಂಬಳಿ ಗ್ರಾಮದಲ್ಲಿ ಸುಮಾರು ಮನೆಗಳು ಕುಸಿದು ಬಿದ್ದಿದ್ದು, ಹತ್ತಾರು ಮಂದಿ ನಿರಾಶ್ರಿತರಾಗಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ.
ಜಿಲ್ಲೆಯ ಅಧಿಕಾರಿಗಳ ನಡೆಯಿಂದ ಗ್ರಾಮ ಹಲವಾರು ಮಂದಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ಈ ಬಗ್ಗೆ ಮಾತನಾಡಿರುವ ಬೆಂಡಬೆಂಬಳಿ ಗ್ರಾಮದ ಮಹಿಳೆ ರಾಜೇಶ್ವರಿ ಸಾಲಿಮಠ ಎಂಬುವರು ನಾವು ತೀವ್ರ ಸಂಕಷ್ಟ ಜೀವನ ನಡೆಸುತ್ತಿದ್ದೇವೆ. ಈವರೆಗೂ ನಮ್ಮ ಸ್ಥಿತಿ ನೋಡಲು ಒಬ್ಬೇ ಒಬ್ಬ ಅಧಿಕಾರಿಯೂ ಬಂದಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.
ಈಗ ಇದೊಂದು ಮನೆಯೂ ಕುಸಿದು ಬಿದ್ದಿರುವುದರಿಂದ ಸಂಬಂಧಿಕರ ಮನೆ ಹಾಗೂ ಇನ್ನಿತರ ಅಕ್ಕ ಪಕ್ಕದವರ ಮನೆಯಲ್ಲಿ ವಾಸಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಇರುವ ಕಾಳು ಕಡಿ ಎಲ್ಲ ಸಾಮಗ್ರಿಗಳು ಹಾಳಾಗಿವೆ. ದನಕರುಗಳನ್ನು ಕೂಡಾ ಹೊರಗಡೆ ಮಳೆಯಲ್ಲಿ ಕಟ್ಟಿದ್ದೇವೆ ಎಂದು ಗೋಳಾಡುತ್ತಿದ್ದಾರೆ.
ವಡಗೇರಾ ತಾಲೂಕು ದಂಡಾಧಿಕಾರಿಗಳು ಇತ್ತಕಡೆ ಗಮನ ಹರಿಸಿದೆ ಗ್ರಾಮಸ್ಥರ ಜೀವನದ ಜತೆ ಚೆಲ್ಲಾಟವಾಡುತ್ತಾ ಇದ್ದಾರೆ. ಯಾವ ಒಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಇನ್ನು ಜಿಲ್ಲಾಧಿಕಾರಿಗಳು ಬೆಂಡಬೆಂಬಳಿ ಗ್ರಾಮಸ್ಥರ ನೆರವಿಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದಾರೆ. ಆದರೆ ಅವರು ಕೂಡ ಬಂದಿಲ್ಲ ಎಂದರೆ ಇವರು ಯಾರಿಗಾಗಿ ಅಧಿಕಾರಿಗಳಾಗಿದ್ದಾರೆ ಎಂಬುವುದು ತಿಳಿಯುತ್ತಿಲ್ಲ .
ಇನ್ನು ಕ್ಷೇತ್ರದ ಜನರಿಂದ ಮತಪಡೆದು ಗೆದ್ದು ವಿಧಾನಸೌಧದಲ್ಲಿ ದರಬಾರು ನಡೆಸುತಿರುವ ಶಾಸಕರು ಬೆಂಡಬೆಂಬಳಿ ಗ್ರಾಮಸ್ಥರ ಮನೆಗಳು ಕುಸಿದು ಬಿದ್ದಿದ್ದರೂ ತಿರುಗಿ ನೋಡಿಲ್ಲ. ಇವರೆಲ್ಲ ಜನ ಪ್ರತಿನಿಧಿಗಳು ಮತ್ತು ಸಾರ್ವಜನಿಕ ಸೇವಕರು ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗಬೇಕು.
ಈಗಲಾದರೂ ಗ್ರಾಮಸ್ಥರ ನೆರವಿಗೆ ಬಂದು ಮನೆ ಕುಸಿದು ಬಿದ್ದವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವತ್ತ ಗಮನಹರಿಸಬೇಕು. ಇಲ್ಲದಿದ್ದರೆ ನಿಮ್ಮಂತ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ಪಡೆದಿರುವುದಕ್ಕೆ ಆ ಜನ ಶಾಪಗ್ರಸ್ತರಾಗಿಯೇ ಬದುಕುವಂತೆ ಮಾಡಿರುವ ನಿಮಗೆ ಅವರ ಶಾಪ ತಟ್ಟದೆ ಇರದು. ಇನ್ನಾದರೂ ಎಚ್ಚೆತ್ತುಕೊಂಡು ನೊಂದವರ ನೆರವಿಗೆ ಧಾವಿಸಿ ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.