ಬೆಂಗಳೂರು: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ಚರ್ಚ್ ಸ್ವೀಟ್‌ನಲ್ಲಿ ಒಳಚರಂಡಿ ನೀರು ರಸ್ತೆಗೆ ಹರಿದು ಗಬ್ಬುನಾರುತ್ತಿದ್ದರೂ ಸಂಬಂಧಪಟ್ಟ ಯಾವೊಬ್ಬ ಅಧಿಕಾರಿಯು ಇತ್ತ ಸುಳಿಯದಿರುವುದು ಅವರ ಕರ್ತವ್ಯ ನಿಷ್ಠೆ ಏನೆಂಬುದನ್ನು ತೋರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಬೆಂಗಳೂರಿನ ಅತ್ಯಂತ ಪ್ರಮುಖ ರಸ್ತೆ ಚರ್ಚ್ ಸ್ಟ್ರೀಟ್‌ನಲ್ಲಿ ಹಲವು ದಿನಗಳಿಂದ ಕಟ್ಟಡವೊಂದರ ಒಳಚರಂಡಿ ನೀರು ರಸ್ತೆಗೆ ಹರಿದು ಸಂಪೂರ್ಣ ಗಬ್ಬು ನಾರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದು, ಈ ಸಂಬಂಧ ಮೋಹನ್ ದಾಸರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದ ಗಮನ ಸೆಳೆದರು.
ಕಳೆದ ಹಲವು ತಿಂಗಳುಗಳಿಂದ ಈ ಸಮಸ್ಯೆಯನ್ನು ಬಗೆಹರಿಸಲಾರದೆ ಸ್ಥಳೀಯ ಪ್ರಭಾವಿ ಮುಖಂಡರು ಅನಗತ್ಯ ಹಸ್ತಕ್ಷೇಪ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕಾದ ಅಧಿಕಾರಿಗಳು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅಕ್ರಮವಾಗಿ ಹುಕ್ಕ ಬಾರ್ ನಡೆಸುತ್ತಿರುವ ಈ ಕಟ್ಟಡದಿಂದ ಈ ರೀತಿ ಒಳಚರಂಡಿ ನೀರು ಹರಿದು ಬರುತ್ತಿದೆ. ಆದರೂ ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಸ್ಮಾರ್ಟ್ ಸಿಟಿ ಕಂಪನಿಯವರು ಸಂಬಂಧಿಸಿದಲ್ಲ ಎಂಬಂತೆ ಒಬ್ಬರಿಗೊಬ್ಬರು ಕೈಚಲ್ಲಿ ಕುಳಿತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸದಿದ್ದಲ್ಲಿ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಇದಕ್ಕೂ ಮುನ್ನ ಎಚ್ಚೆತ್ತುಕೊಂಡು ನಾಗರಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಿ ಎಂದು ಮೋಹನ್ ದಾಸರಿ ಎಚ್ಚರಿಸಿದರು.
ಈ ವೇಳೆ ಸ್ಥಳೀಯ ಆಮ್ ಆದ್ಮಿ ಪಕ್ಷದ ಮುಖಂಡ ಅನಿಲ್ ನಾಚಪ್ಪ, ಮೋಹನ್ ಇನ್ನಿತರರು ಇದ್ದರು.