ಬೆಂಗಳೂರು: ಮೊದಲ ತಿಂಗಳಿನಿಂದಲೇ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆಯನ್ನು ಎಳೆದಿದೆ. ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಮೊದಲನೇ ತಿಂಗಳು ಹುಸಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬರುವಂತ ದಿನಗಳಲ್ಲಿ ಸಾರಿಗೆ ನಿಗಮಗಳು ಬಸ್‌ಗಳನ್ನು ಡೀಸೆಲ್ ಇಲ್ಲದೆ ನಿಲ್ಲಿಸುವಂತದ್ದು, ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತದ್ದು, ಕೆಟ್ಟ ಬಸ್‌ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರ ಜೂನ್ 11ರಿಂದ 30ರವೆಗೆ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೌಲ್ಯ 2,50,96,43,365 ರೂ.ಗಳಾಗಿದ್ದು ಅದನ್ನು ಬಿಡುಗಡೆ ಮಾಡುವ ಬದಲಿಗೆ ಕೇವಲ 1,25,48,21,000 ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಿಂದ ನಿಗಮಗಳು ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.
ಇನ್ನು ನಾಲ್ಕೂ ನಿಗಮಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 92,73,75,730 ರೂ.ಗಳನ್ನು ಬಿಡುಗಡೆ ಮಾಡಬೇಕಿದೆ. ಆದರೆ ಸರ್ಕಾರ ಕೇವಲ 47,15,12,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 43,64,46,311 ರೂ.ಗಳನ್ನು ಬಿಡುಗಡೆ ಮಾಡಬೇಕು, ಆದರೆ ಕೇವಲ 21,85,10,000 ರೂ.ಗಳನ್ನು ಬಿಡುಗಡೆ ಮಾಡಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 64,99,21,721 ರೂ.ಗಳನ್ನು ಬಿಡುಗಡೆ ಮಾಡಬೇಕು. ಆದರೆ ಈ ಸಂಸ್ಥೆಗೆ 32,57,59,000 ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 46,92,69,504 ರೂ.ಗಳ ಬದಲಿಗೆ ಕೇವಲ 23,90,40,000 ರೂ.ಗಳನ್ನಷ್ಟೆ ಬಿಡುಗಡೆ ಮಾಡಿದೆ.
ಇದರಿಂದ ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟಸಾಧ್ಯವಾಗಲಿದೆ. ಇದರ ಜತೆಗೆ ಬಸ್‌ಗಳಿಗೆ ಡೀಸೆಲ್ ತುಂಬಿಸಲು ಎಲ್ಲಿಂದ ಹಣ ತರಬೇಕು ಎಂದು ಸರ್ಕಾರ ಈ ನಡೆಯಿಂದ ಉನ್ನತ ಅಧಿಕಾರಿಗಳು ಅಸಮಾಧಾನಗೊಂಡಿದ್ದಾರೆ.