ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಈಗ ತೂಕದ ಬದಲಿಗೆ ಕಣ್ಣಿಗೆ ಕಾಣುವ ವಸ್ತುಗಳಿಗೆ ಲಗೆಜ್ ಟಿಕೆಟ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಸಾರಿಗೆ ನಿಗಮಗಳ ನಿರ್ವಾಹಕರನ್ನು ದೂರಬೇಕೋ ಇಲ್ಲ ಅಧಿಕಾರಿಗಳನ್ನು ದೂರಬೇಕೋ ಎಂಬ ಗೊಂದಲದಲ್ಲಿ ಪ್ರಯಾಣಿಕರು ಸಿಲುಕಿದ್ದಾರೆ.
ಸಾಮಾನ್ಯವಾಗಿ ಸಾರಿಗೆ ಬಸ್‌ಗಳಲ್ಲಿ 30 ಕೆಜಿ ವರೆಗಿನ ಲಗೇಜುಗಳನ್ನು ಉಚಿತವಾಗಿ ಸಾಗಿಸುವ ಅವಕಾಶವಿದೆ ಎಂಬ ನಿಯಮವೇ ಇದೆ. ಆದರೆ ಇತ್ತೀಚೆನ ಬೆಳವಣಿಗೆ ನೋಡಿದರೆ, ಅರ್ಧ ಕೆಜಿಯ ವಸ್ತುಗಳಿಗೂ ಲಗೆಜ್ ಟಿಕೆಟ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ತಾಜಾ ನಿದರ್ಶನ ಎಂದರೆ ಇಲ್ಲೊಬ್ಬ ನಿರ್ವಾಹಕರು ಸೈಕಲ್ ಟೈರ್ ಒಂದಕ್ಕೂ ಟಿಕೆಟ್ ನೀಡಿದ್ದಾರೆ. ಅದಕ್ಕೆ ಅಚ್ಚರಿ ಪಡಬೇಡಿ. ಕಾರಣ ನಿಗಮದ ತನಿಖಾಧಿಕಾರಿಗಳು ಬಂದರೆ ಈ ಟೈರ್ ನೋಡಿ ಇದಕ್ಕೆ ಏಕೆ ನೀವು ಟಿಕೆಟ್ ಮಾಡಿಲ್ಲ ಎಂದು ದಂಡ ವಿಧಿಸುವ ಜತೆಗೆ ಮೆಮೋ ಕೂಡ ನೀಡುತ್ತಾರೆ ಎಂಬ ಭಯದಿಂದ ಈ ರೀತಿ ನಿರ್ವಾಹಕರು ನಡೆದುಕೊಳ್ಳುತ್ತಿದ್ದಾರೆ.
ಘಟನೆ ವಿವರ: ರಾಣಿಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ನಂಬರಿನ ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಕ ಉಮೇಶ್ ಪಾಟೀಲ್ ಎಂಬುವರು ತಮ್ಮ ಮಗನ ಜತೆ ತಮ್ಮ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಗನ ಸೈಕಲ್ಗೆಂದು ಟೈರ್‌ವೊಂದನ್ನು ಖರೀದಿಸಿದ್ದರು. ಆ ಟೈರ್ ಹಿಡಿದುಕೊಂಡು ಬಸ್ ಹತ್ತಿದ್ದಾರೆ.
ಇದರಿಂದ ಗಾಬರಿಗೊಂಡ ನಿರ್ವಾಹಕ ಎಲ್ಲಿ ನಮಗೆ ತನಿಖಾಧಿಕಾರಿಗಳು ದಂಡ ವಿಧಿಸುತ್ತಾರೋ ಎಂದು ಭಯಗೊಂಡು ಟಿಕೆಟ್ ದರ ಒಬ್ಬರಿಗೆ 35 ರೂಪಾಯಿಯಂತೆ ತಂದೆ ಮತ್ತು ಮಗ ಇಬ್ಬರಿಗೂ 70 ರೂಪಾಯಿ ಜತೆಗೆ ಟೈರ್ಗೂ 5 ರೂ. ಸೇರಿಸಿ ಒಟ್ಟು 75 ರೂ. ಟಿಕೆಟ್ ಕೊಟ್ಟಿದ್ದಾರೆ.
ಆ ಟಿಕೆಟ್ನಲ್ಲಿ ಲಗೆಜ್ ಯೂನಿಟ್ 1 ಎಂದು ಉಲ್ಲೇಖಿಸಿ 5 ರೂ. ಚಾರ್ಜ್ ಮಾಡಿದ್ದಾರೆ. ಇದನ್ನು ಕಂಡು ಗಾಬರಿ ಮತ್ತು ಅಚ್ಚರಿಗೊಂಡ ಉಮೇಶ್ ಪಾಟೀಲ್ ಅವರು, ಟೈರ್ಗೂ ಏಕೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರೆ ನಮಗೆ ಮೇಲಿಂದ ಅದೇಶ ಬಂದಿದೆ ಎಂದು ಕಂಡಕ್ಟರ್ ಹೇಳಿದ್ದಾರೆ.
ಇನ್ನು ಕೆಎಸ್ಆರ್ಟಿಸಿಯ ನಿಮಯದ ಪ್ರಕಾರ ಪ್ರತಿ ಪ್ರಯಾಣಿಕರು 30 ಕೆಜಿ ವರೆಗೆ ಲಗೆಜ್‌ಅನ್ನು ಉಚಿತವಾಗಿ ತೆಗೆದುಕೊಂಡು ಹೋಗಲು ಅವಕಾಶ ಇದೆ. ಅದಕ್ಕಿಂತ ಹೆಚ್ಚು ತೂಕದ ಲಗೆಜ್ ತೆಗೆದುಕೊಂಡು ಹೋಗಿದಲ್ಲಿ ನಿಗದಿತ ತೂಕವನ್ನು ಬಿಟ್ಟು ಉಳಿದ ಹೆಚ್ಚುವರಿ ತೂಕಕ್ಕೆ ದರ ವಿಧಿಸಲಾಗುತ್ತದೆ.