ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದ ಬಳಿ ನಡೆದಿದೆ.
ದೊಡ್ಡಬಳ್ಳಾಪುರ ಘಟಕದ ಚಾಲಕ ಪ್ರಸನ್ನ ಎಂಬುವರೆ ಹಲ್ಲೆಗೊಳಗಾದ ಚಾಲಕ. ಮುಂದೆ ಹೋಗುತ್ತಿದ್ದ ಆಟೋ ದಾರಿ ಬಿಡದೆ ಅಡ್ಡದಿಡ್ಡಿ ಚಾಲನೆ ಮಾಡಿದ್ದಾರೆ. ಈ ನಡುವೆ ಕೆಎಸ್ಆರ್ಟಿಸಿ ಚಾಲಕ ಓವರ್‌ಟೆಕ್ ಮಾಡಿದ್ದರಿಂದ ಆಟೋದಲ್ಲಿದ್ದ ಗೋವಿಂದರಾಜು, ಹನುಮಂತರಾಜು, ನರಸಿಂಹರಾಜು ಸೇರಿ ನಾಲ್ವರು ಬಸ್ ತಡೆದು ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಮಂಗಳವಾರ ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಮಾಡೇಶ್ವರದಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿತ್ತು. ಈ ವೇಳೆ ತಮಗೆ ದಾರಿ ಬಿಡದೆ ಆಟೋ ಓಡಿಸಿಕೊಂಡು ಹೋಗುತ್ತಿದ್ದರು. ಬಳಿಕ ಬಸ್ ಓವರ್‌ಟೆಕ್ ಮಾಡಿದ್ದರಿಂದ ಕುಪಿತಗೊಂಡು ಬಸ್ ಅಡ್ಡಗಟ್ಟಿ ಆಟೋದಲ್ಲಿದ್ದ ನಾಲ್ವರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹಲ್ಲೆಯಿಂದ ಚಾಲಕನನ್ನ ರಕ್ಷಿಸಲು ಹೋದ ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಬಸ್ ಚಾಲಕ ಪ್ರಸನ್ನ ಅವರನ್ನು ಸ್ಥಳೀಯ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ದೊಡ್ಡಬೆಳವಂಗಲ ಪೊಲೀಸರು ನಾಲ್ವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಈ ರೀತಿಯ ಹಲ್ಲೆಗೊಳಗಾದ ಸಾರಿಗೆ ನೌಕರರ ಹಿತರಕ್ಷಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂ ಮತ್ತು ಹೈಹೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರು ಸಂಘಕಟ್ಟಿ ಆ ಮೂಲಕ ಚಾಲನಾ ಸಿಬ್ಬಂದಿಯ ರಕ್ಷಣೆಗೆ ನಿಂತಿದ್ದಾರೆ. ಆದರೆ, ವಕೀಲರು ತಮ್ಮ ಶ್ರಮಕ್ಕೆ ತಕ್ಕನಾಗಿ ನೌಕರರು ನಡೆದುಕೊಳ್ಳುತ್ತಿಲ್ಲ ಎಂದು ಬೇಸರಗೊಂಡಿದ್ದು, ಸಾಮಾಜಿಕ ಜಾಲತಾಣದಿಂದ ದೂರ ಸರಿದಿದ್ದಾರೆ.
ಇದರ ಜತೆಗೆ ಇನ್ನು ಮುಂದೆ ನಾವು ಸಮಾಜಿಕ ಜಾಲತಾಣದ ಮೂಲಕ ನೌಕರರಿಗೆ ಕಾನೂನಾತ್ಮಕವಾಗಿ ನೀಡುತ್ತಿದ್ದ ಸಲಹೆಗಳನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಯಾವುದೇ ಪ್ರಕರಣವಿದ್ದರೂ ಆ ಬಗ್ಗೆ ಕಚೇರಿಯಲ್ಲೇ ಭೇಟಿ ಮಾಡಬೇಕು ಎಂದು ತಿಳಿಸಿದ್ದಾರೆ.