ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆಯಲು ಇಂದು ಹೈದರಾಬಾದ್‌ನಲ್ಲಿ ಸಂಧಾನ ಸಭೇ ನಡೆಯುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.
ಅದು ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಈ ಸಭೆ ನಡೆಸುವ ಸಾಧ್ಯತೆ ಇದ್ದು, ರಾಜ್ಯದ ಹಿರಿಯ ನಾಯಕರ ಸಮ್ಮುಖ ಮಾತುಕತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್ ಅವರು ಹರಿಪ್ರಸಾದ್ ಅವರನ್ನು ಭೇಟಿಯಾಗಿದ್ದು, ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಮನವೊಲಿಕೆಗೆ ಹರಿಪ್ರಸಾದ್ ಜಗ್ಗಿಲ್ಲ.
ಇದರ ನಡುವೆಯೇ ನಿನ್ನೆ ಸೆ.15ರ ಸಂಜೆಯೇ ಬಿ.ಕೆ ಹರಿಪ್ರಸಾದ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೈದರಾಬಾದಿಗೆ ತೆರಳಿದ್ದಾರೆ. ಸಿಎಂ ಸಿದ್ದರಾಮಯ್ಯ ಇಂದು ಹೈದರಾಬಾದ್‌ಗೆ ಹೊರಟಿದ್ದಾರೆ. ಹೀಗಾಗಿ ಹೈದರಾಬಾದ್‌ನಲ್ಲಿ ಸಂಧಾನ ನಡೆಸುವ ಸಾಧ್ಯತೆಯಿದೆ. ಒಂದು ವೇಳೆ ಹೈದರಾಬಾದ್‌ನಲ್ಲಿ ಸಂಧಾನ ಸಭೆ ಮಾಡಲು ಆಗದೆ ಹೋದರೆ, ಗೌರಿಗಣೇಶ ಹಬ್ಬದ ಬಳಿಕ ದೆಹಲಿಯಲ್ಲಿ ನಾಯಕರು ಒದೆಡೆ ಸೇರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಎಐಸಿಸಿ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಹರಿಪ್ರಸಾದ್ ಉತ್ತರ ನೀಡಿದ್ದಾರೆ. ಉತ್ತರವನ್ನು ಟೈಪ್ ಮಾಡಿಸಿ ಪೋಸ್ಟ್ ಮಾಡಲಾಗಿದ್ದು, ಗೌಪ್ಯವಾಗಿಯೇ ಶಿಸ್ತು ಸಮಿತಿಗೆ ತಲುಪಿಸಿದ್ದಾರೆ. ತಮ್ಮನ್ನು ಕಡೆಗಣಿಸಲಾಗಿರುವ ವಿಚಾರವನ್ನು ಎಐಸಿಸಿ ಗಮನಕ್ಕೆ ಅವರು ತಂದಿದ್ದಾರೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಈ ಇಬ್ಬರೂ ಮುಖಂಡರನ್ನು ಚೆನ್ನಾಗಿ ಬಲ್ಲವರಾಗಿದ್ದು, ಸಂಧಾನಕ್ಕೆ ಹಿರಿಯ ಸಚಿವರನ್ನು ಮುಂದೆ ಬಿಟ್ಟಿದ್ದರು. ಈ ನಡುವೆ ಸಿಎಂ ಕೂಡ ತಮ್ಮ ಆಪ್ತರಲ್ಲಿ ಹಲವರನ್ನು ಖಾಸಗಿಯಾಗಿ ಭೇಟಿಯಾಗಿದ್ದು, ಹರಿಪ್ರಸಾದ್ ಅವರ ಭಿನ್ನಮತ ಮುಂದುವರಿದರೆ ಏನು ಮಾಡಬಹುದು ಎಂಬ ಬಗ್ಗೆ ತಂತ್ರ ಹೆಣೆಯುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.