ಮೈಸೂರು: ಸೆಪ್ಟಂಬರ್ 30 ರ ಒಳಗಾಗಿ ಕಬ್ಬಿನ ಹೆಚ್ಚುವರಿ ದರ 150 ರೂ. ಬಾಕಿ ಕೂಡಿಸದಿದ್ದರೆ, ಪ್ರಸಕ್ತ ಸಾಲಿನ ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಮಾಡದಿದ್ದರೆ ಬೆಂಗಳೂರು ವಿಧಾನಸೌಧದ ಎದುರು ಕಬ್ಬು ಬೆಳೆಗಾರರು ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಗರದ ಜಲದರ್ಶಿನಿ ಅಥಿತಿ ಗೃಹದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಸಕ್ತ ರೈತರ ಸಮಸ್ಯೆಗಳನ್ನು ಕುರಿತು ಮಾತನಾಡಿದ ಅವರು, ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕಬ್ಬು ಬೆಳೆ ಒಣಗುತ್ತಿದೆ. ಶೇಕಡ 40ರಷ್ಟು ಇಳುವರಿ ಕಡಿಮೆಯಾಗಿದೆ.
ಕಬ್ಬಿಗಾಗಿ ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಲು ಪೈಪೋಟಿ ನಡಿಸುತ್ತಿವೆ. ಸಕ್ಕರೆ ಉತ್ಪಾದನೆ ಕಡಿಮೆ ಯಾಗಿರುವ ಕಾರಣ ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧ ಏರಿದೆ. ಆದರೆ ಕಬ್ಬಿನ ಎಫ್‌ಆರ್‌ಪಿ ದರವನ್ನು ಕಳೆದ ವರ್ಷಕ್ಕಿಂತ ಕೇವಲ 100 ರೂ. ಮಾತ್ರ ಏರಿಕೆ ಮಾಡಿ 3150 ನಿಗದಿ ಮಾಡಿ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಯತನಾಲ್ ಉತ್ಪಾದನೆ ಮಾಡಿ ಹೆಚ್ಚು ಲಾಭ ಗಳಿಸುತ್ತಿವೆ. ಆದರೆ ಕಬ್ಬು ಬೆಳೆಗಾರರು ಬೆಲೆ ಕಡಿಮೆ ಎಂದು ಪ್ರತಿಭಟನೆ ನಡೆಸಿದಾಗ ರಾಜ್ಯ ಸರ್ಕಾರ ಎರಡು ಸಭೆ ನಡೆಸಿದ್ದು ಬಿಟ್ಟರೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಇನ್ನು 15 ದಿನ ಕಾದು ನೋಡುತ್ತೇವೆ ನಿರ್ಲಕ್ಷ್ಯ ಮಾಡಿದರೆ ಹೋರಾಟದ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿದರೆ ಸಾಲದು ಈಗಾಗಲೇ ರೈತರು ತತ್ತರಿಸಿ ಆತ್ಮಹತ್ಯೆ ಶರಣಾಗುತ್ತಿದ್ದಾರೆ ಬರಗಾಲ ಘೋಷಣೆ ಪ್ರದೇಶಗಳ ರೈತರ ಸಂಪೂರ್ಣ ಸಾಲ ಮನ್ನಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಬೆಳೆ ನಷ್ಟ ಪರಿಹಾರ ಪ್ರತಿ ಎಕ್ಕರಗೆ 25,000 ರೂ. ನೀಡಬೇಕು. ಬರ ಕಾಮಗಾರಿಯಲ್ಲಿ ಸಂಕಷ್ಟದ ರೈತರಿಗೆ ನರೇಗಾ ಉದ್ಯೋಗ ಭರವಸೆ ಯೋಜನೆಯಡಿ ಅಕ್ಕಿ ರಾಗಿ ಗೋಧಿ ಬೇಳೆ ವಿತರಿಸಬೇಕು. ಜಾನುವಾರಗಳ ಕುಡಿಯುವ ನೀರು ಮೇವು ಸೌಲಭ್ಯ ಪೂರೈಕೆ ಮಾಡಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಗಲು ವೇಳೆ ಕೃಷಿ ಪಂಪ್‌ಸೆಟ್‌ಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ಹಾಲಿ ಬೆಳೆದು ನಿಂತಿರುವ ಅಲ್ಪಸ್ವಲ್ಪ ಒಣಗುವ ಬೆಳೆಗಳನ್ನು ಜನರ ಆಹಾರದ ದೃಷ್ಟಿಯಿಂದ ಸಂರಕ್ಷಿಸಬೇಕು. ರಾಜ್ಯ ಸರ್ಕಾರ ಕಾವೇರಿ ಜಲಾಶಯಗಳ ನೀರು ಖಾಲಿ ಮಾಡಿದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ರೈತರನ್ನು ಸಂಪೂರ್ಣವಾಗಿ ಬರಗಾಲಕ್ಕೆ ಒಳಗಾದ ಪ್ರದೇಶವೆಂದು ಘೋಷಣೆ ಮಾಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಾವೇರಿ ಜಲಾನಯನ ಪ್ರದೇಶದ ತಲಕಾವೇರಿ, ಕೆಆರ್‌ಎಸ್, ಕಬಿನಿ, ಮೇಕೆದಾಟು, ಬಿಳುಗುಂಡ್ಲು ಭಾಗದ ವಸ್ತು ಸ್ಥಿತಿಯ ಅರಿಯಲು ಕರ್ನಾಟಕ ಜಲ ಸಂರಕ್ಷಣ ಸಮಿತಿಯ ಹತ್ತು ಜನರ ಪರಣಿತರ ನಿಯೋಗ ಸದ್ಯದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ನೀರಿನ ಲಭ್ಯತೆ, ರೈತರ ಬೆಳೆ ನಷ್ಟ ಅಂದಾಜು, ಅಧ್ಯಯನ ನಡೆಸಲಿದೆ. ಅಂತಿಮ ವರದಿಯ ನಂತರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ತಿಳಿಸಿದರು.
ರೈತರು, ಕೂಲಿ ಕಾರ್ಮಿಕರು ಬರಗಾಲದ ಬೇಗೆಯಲ್ಲಿರುವ ಕಾರಣ ರಾಜ್ಯ ಸರ್ಕಾರ ಸಾಂಪ್ರದಾಯಿಕ ಸರಳ ಧಸರ ಆಚರಣೆ ಮಾಡುವುದು ಸೂಕ್ತ. ಹೊಟ್ಟೆಗೆ ಇಟ್ಟಿಲ್ಲ ಜುಟಿಗೆ ಮಲ್ಲಿಗೆ ಹೂವು ಅನ್ನುವಂತಾಗಬಾರದು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಂದು ದೇಶ ಒಂದು ಚುನಾವಣೆ ನಡೆಸುವುದು ದೇಶದ ಅಭಿವೃದ್ಧಿ ದೃಷ್ಟಿಯಿಂದ ಜನಸಾಮಾನ್ಯರ ದೃಷ್ಟಿಯಿಂದ ಖರ್ಚು ಹಾಗೂ ಸಮಯ ಉಳಿತಾಯ. ಇದು ಒಳ್ಳೆ ಬೆಳವಣಿಗೆ ಯಾವುದೇ ರಾಜಕೀಯ ಪಕ್ಷ ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದರು.
ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ಹೆಗ್ಗೂರು ರಂಗರಾಜ್, ಕಾಟೂರು ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ ಇದ್ದರು.