ಬೆಂಗಳೂರು: ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯ ಮಕ್ಕಳಾಗಿ ತಂದೆ ತಾಯಿಯರ ಜತೆಗೆ ಕಲಿತ ಶಾಲೆಗೂ ಕೀರ್ತಿ ತರುವಂತ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಮಹದೇವ್ ಜೋಶಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿರುವ ಏಷ್ಯನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಇತ್ತೀಚೆಗೆ ಡಿಂಪಲ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಾಲೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಡಿಂಪಲ್ ಫೌಂಡೇಷನ್ ಮತ್ತು ಶಾಲೆ ವತಿಯಿಂದ ಪ್ರತಿವರ್ಷದಂತೆ ಈವರ್ಷವೂ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ದಿನಬಳಕೆಯ ಅಡುಗೆ ಸಾಮಗ್ರಿ ಸೇರಿದಂತೆ ಇತರೆ ವಸ್ತುಗಳನ್ನು ನೀಡುತ್ತಿರುವ ಶ್ಲಾಘನೀಯ ಸೇವೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಈ ನಿಮಿತ್ತ ಸೇವೆಯ ಸಾರ್ಥಕ ಎಂದೇ ಹೆಸರಾದ ಶ್ರೀಯುತ ರಾಜಣ್ಣ ಅವರು ಸತತ ಐದು ವರ್ಷಗಳಿಂದ 1500 ಬಡ ಕುಟುಂಬದವರಿಗೆ ಅಕ್ಕಿ ಹಾಗೂ ತರಕಾರಿ ಕಿಟ್ ಮತ್ತು 150 ಜನ ಗರ್ಭಿಣಿಯರಿಗೆ ಸೀಮಂತ ಬಾಗೀನ ಕಿಟ್‌ಗಳನ್ನ ನೀಡುತ್ತ ಬಂದಿರುವುದು ಸಂತಸದ ವಿಷಯ ಇವರ ಈ ಸಾರ್ಥಕ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಆಶೀಸಿದರು.
ನಮ್ಮ ಶಾಲೆಯು ಪ್ರಾರಂಭಗೊಂಡು ಹತ್ತು ವರ್ಷಗಳನ್ನು ಪೂರೈಸಿದೆ. ಇದರ ಜತೆಗೆ ನಮ್ಮ ಶಾಲೆಯು ಪ್ರಸ್ತುತ ಅತ್ಯುತ್ತಮ ಶಾಲೆ ಎಂದು ಗುರ್ತಿಸಿ ಕೊಂಡಿದೆ ಎಂದು ಸಂಸ್ಥಾಪಕರು ಹಾಗೂ ಶಾಲೆಯ ಪ್ರಾಂಶುಪಾಲರಾದ ಡಾ.ಡಿಂಪಲ್. ಆರ್.ಗೌಡ ಹೇಳಿದರು.
ನಮ್ಮ ಶಾಲೆಯಲ್ಲಿ ಅನುಭವಿ ಶಿಕ್ಷಕರಿದ್ದು ಉತ್ತಮವಾದ ಭೋದನೆ, ಉತ್ತಮ ಫಲಿತಾಂಶವನ್ನು ಪಡೆಯುಲು ಶಕ್ತವಾಗಿದೆ. ಇದರ ಜತೆಗೆ ಹಲವಾರು ಪ್ರಶಸ್ತಿಗಳನ್ನು ಶಾಲೆ ಮುಡಿಗೇರಿಸಿಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಸ್ತುತ 2023ರ ಶೈಕ್ಷಣಿಕ ವರ್ಷಕ್ಕೆ ನಮ್ಮ ವಿದ್ಯಾ ಸಂಸ್ಥೆಯು ಹತ್ತು ವರ್ಷಗಳನ್ನು ಪೂರೈಸುತ್ತಿರುವುದಕ್ಕೆ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದರ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭದಲ್ಲಿ 1500 ಬಡ ಕುಟುಂಬದವರಿಗೆ ಅಕ್ಕಿ, ತರಕಾರಿ ಕಿಟ್ ವಿತರಿಸಲಾಯಿತು ಎಂದು ತಿಳಿಸಿದರು.
ಇನ್ನು 150 ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ವೃದ್ಧರಿಗೆ ಊರುಗೋಲುಗಳನ್ನು ವಿರತಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲ ಎಚ್. ಮಂಜುನಾಥ್, ಶಾಲೆಯ ಚೇರ್ಮನ್ ಕೆ. ಮಹೇಶ್, ಶಿಕ್ಷಕರು ಹಾಗೂ ಶಾಲೆಯ ಆಡಳಿತ ವರ್ಗದ ಸಿಬ್ಬಂದಿಗಳು ಇದ್ದರು.