ಮಳವಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಳವಳ್ಳಿ ಘಟಕದಲ್ಲಿ ನಿರ್ವಾಹಕರಾಗಿರುವ ಬಿ.ಎಸ್.ಮಹೇಶ್ ಅವರು ಅರಣ್ಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಮಂಡಿಸಿ ಮೈಸೂರು ವಿವಿಯಿಂದ ಪಿ.ಎಚ್.ಡಿ ಪದವಿ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಗಾಂಧಿ ಜಯಂತಿಯಂದು ನಿಗಮದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಅವರು ಬಿ.ಎಸ್.ಮಹೇಶ್ ಅವರಿಗೆ ಪ್ರಸಂಶನ ಪತ್ರ ನೀಡಿದ್ದು, ಆ ಪ್ರಸಂಶನ ಪತ್ರವನ್ನು ಮಳವಳ್ಳಿ ಘಟಕದಲ್ಲಿ ಗಾಂಧಿ ಜಯಂತಿಯ ದಿನವಾದ ಇಂದು ಆಯೋಜಿಸಿದ್ದ ಸಮಾರಂಭದಲ್ಲಿ ನೀಡಿ ಘಟಕದ ಅಧಿಕಾರಿಗಳು ಸನ್ಮಾನಿಸಿದರು.
ಇನ್ನು ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು, ನಿರ್ವಾಹಕ ಬಿ.ಎಸ್.ಮಹೇಶ್ ಅವರು ನಿಗಮದ ಮಂಡ್ಯ ವಿಭಾಗದ ಮಳವಳ್ಳಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, “ಕಾವೇರಿ ವನ್ಯ ಜೀವಿ ವಲಯದ ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯ ವೀಕ್ಷಕರ ಸಮಸ್ಯೆಗಳು ಮತ್ತು ಸವಾಲುಗಳ ಬಗೆಗಿನ ಅಧ್ಯಯನ” ಎಂಬ ವಿಷಯ ಕುರಿತು ಡಾ.ಗೋಪಾಲರಾಜು ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾಲಯದ ಪಿಎಚ್‌ಡಿ ಪದವಿ ಸಂದಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ ಎಂದು ಪ್ರಸಂಶನ ಪತ್ರದಲ್ಲಿ ತಿಳಿಸಿದ್ದಾರೆ.
ಮುಂದುವರಿದು ಈ ತಮ್ಮ ಸಾಧನೆಯು ನಿಗಮಕ್ಕೆ ಹೆಮ್ಮೆ ತಂದಿದೆ ಹಾಗೂ ಇತರರಿಗೆ ಮಾದರಿಯಾಗಿದೆ. ತಾವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಆಶಿಸುವ ಮೂಲಕ ತಮಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಮಹೇಶ್, ನನ್ನ ಈ ಪರಿಶ್ರಮವನ್ನು ಗುರುತಿಸಿ ಈ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದ ಎಲ್ಲರಿಗೂ ಹಾಗೂ ಘಟಕದ ಎಲ್ಲ ಚಾಲನಾ, ತಾಂತ್ರಿಕ ಮತ್ತು ಆಡಳಿತ ವರ್ಗದವರಿಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೆಯೇ ನನ್ನನ್ನು ಗುರುತಿಸಿ ಪ್ರಸಂಶನ ಪತ್ರ ನೀಡಿದ ವ್ಯವಸ್ಥಾಪಕ ನಿರ್ದೇಶಕರವರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ಮಹೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕರಾದ ದಯಾನಂದ, ಸಿಬ್ಬಂದಿ ಮೇಲ್ವಿಚಾರಕರಾದ ಅಶ್ವಿನಿ, ಲೆಕ್ಕಪತ್ರ ಮೇಲ್ವಿಚಾರಕರಾದ ಶಿವನಂಜಮ್ಮ, ತಾಂತ್ರಿಕ ಮೇಲ್ವಿಚಾರಕ ಕುಮಾರ್, ಅಂಕಿ ಅಂಶ ಮೇಲ್ವಿಚಾರಕ ವೆಂಕಟರಾಮ, ಸಹಾಯಕ ಸಂಚಾರ ನಿರೀಕ್ಷಕ ನ್. ಕೆ .ಕುಮಾರ್, ಸಂಚಾರ ನಿಯಂತ್ರಕ ನರಸಪ್ಪ, ಭದ್ರತಾ ಶಾಖೆಯ ಲಿಂಗರಾಜು, ಕ್ಯಾಶಿಯರ್ ಬಸವರಾಜ, ತಾಂತ್ರಿಕ ವರ್ಗದವರಾದ ಭಾಸ್ಕರ್, ನಂದಕುಮಾರ್, ಮಂಜುನಾಥ ಎಂಬಿ, ಮೇಘಶ್ರೀ, ಜ್ಯೋತಿ, ಹಿಟ್ಟವಳ್ಳಿ ನಾಗರಾಜು, ಪವನ್, ಚಾಲಕರಾದ ಕೆಂಪರಾಜು, ಸಂತೋಷ್ ಉಪಸ್ಥಿತರಿದ್ದರು.