ಮೈಸೂರು: ದಸರಾ ಮಹೋತ್ಸವದ ವೇಳೆ ಜಂಬೂ ಸವಾರಿಯಲ್ಲಿ ಸಾಗುವ ಗಜಪಡೆ ಮತ್ತು ಅಶ್ವಾರೋಹಿ ದಳದ ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸುವ ಉದ್ದೇಶದಿಂದ ಅರಮನೆಯಲ್ಲಿರುವ ಫಿರಂಗಿ ಗಾಡಿಗಳನ್ನು ಹೊರತೆಗೆದು ಶುಚಿಗೊಳಿಸಿ ಪೂಜೆ ಸಲ್ಲಿಸಲಾಯಿತು.
ಈಗಾಗಲೇ ಅರಮನೆಯಲ್ಲಿ ದಸರಾ ಚಟುವಟಿಕೆಗಳು ಶುರುವಾಗಿದ್ದು ಅದರಂತೆ ಅಂಬಾವಿಲಾಸ ಅರಮನೆ ಆವರಣದ ಆನೆಬಾಗಿಲು ಬಳಿ ಫಿರಂಗಿ ಗಾಡಿಗಳಿಗೆ ಅರಮನೆ ಪುರೋಹಿತ ಪ್ರಹ್ಲಾದ್‌ರಾವ್ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್.ಬಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. 11 ಫಿರಂಗಿ ಗಾಡಿಗಳಿಗೆ ಪೂಜೆ, ಮಹಾಮಂಗಳಾರತಿಯನ್ನು ನಡೆಸಲಾಯಿತು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ರಮೇಶ್.ಬಿ ಅವರು ಗಣಪತಿ, ಚಾಮುಂಡೇಶ್ವರಿ ಪೂಜೆ ಮಾಡಿ ಫಿರಂಗಿಗಳನ್ನು ನಮ್ಮ ವಶಕ್ಕೆ ಪಡೆಯಲಾಗಿದೆ. ವಸ್ತುಪ್ರದರ್ಶನ ಆವರಣದಲ್ಲಿ ಮೂರು ಬಾರಿ ಗಜಪಡೆ, ಅಶ್ವಾರೋಹಿ ದಳಕ್ಕೆ ಶಬ್ದದ ಪರಿಚಯ ಮಾಡಿಕೊಡಲಾಗುತ್ತದೆ. ಅ.24ರಂದು ಜಂಬೂ ಸವಾರಿ ವೇಳೆ ಕುಶಾಲತೋಪು ಸಿಡಿಸಲಾಗುತ್ತದೆ ಎಂದು ಹೇಳಿದರು.
ಡಿಸಿಎಫ್ ಸೌರಭ್ ಕುಮಾರ್ ಮಾತನಾಡಿ, ಫಿರಂಗಿಗಳಿಗೆ ಪೂಜೆ ಸಲ್ಲಿಸಲಾಗಿದೆ. ಪೊಲೀಸ್ ಆಯುಕ್ತರು ದಿನಾಂಕ ನಿಗದಿಪಡಿಸಿದ ನಂತರ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಗಜಪಡೆಯ ಎಲ್ಲಾ 14 ಆನೆಗಳು ಆರೋಗ್ಯವಾಗಿದ್ದು, ತಾಲೀಮಿನಲ್ಲಿ ಭಾಗವಹಿಸುತ್ತಿವೆ. ಸುಗ್ರೀವ ಆನೆಗೆ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ ಎಂದರು.
ಪ್ರತಿವರ್ಷ ಜಂಬೂ ಸವಾರಿ ಹೊರಡುವ ಮುನ್ನ ಸಿಡಿಸುವ ಕುಶಾಲತೋಪು ಶಬ್ದಕ್ಕೆ ಗಜಪಡೆ, ಅಶ್ವಾರೋಹಿ ಪಡೆ ಬೆದರದಂತೆ ತಾಲೀಮು ನಡೆಸುವುದು ವಾಡಿಕೆ. ಅದರಂತೆ ಈ ಬಾರಿಯೂ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಕುಶಾಲತೋಪಿನ ಶಬ್ಧ ಪರಿಚಯಿಸಲು ಫಿರಂಗಿ ತಾಲೀಮು ನಡೆಸಲು ಸಿದ್ಧತೆ ಮಾಡಲಾಯಿತು. ಜಂಬೂ ಸವಾರಿ ದಿನದಂದು 21 ಕುಶಾಲತೋಪು ಸಿಡಿಸುವ ಕಾರ್ಯ ನಡೆಯಲಿದ್ದು, ಸಿಎಆರ್ ಪೊಲೀಸರು ಕುಶಾಲ ತೋಪು ಸಿಡಿಸಲು ಸಿದ್ಧತೆ ನಡೆಸಿದರು.
ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.