ಬೆಂಗಳೂರು: ಚಾಲನಾ ಸಿಬ್ಬಂದಿಗಳಿಗೆ ನಿರ್ದಿಷ್ಟ ಮಾರ್ಗ ನೀಡಲು, ಉತ್ತಮ ಗುಣಮಟ್ಟದ ಬಸ್‌ಗಳನ್ನು ಕೊಡಲು ಹಾಗೂ ರಜೆ ಮಂಜೂರು ಮಾಡುವುದಕ್ಕೆ ಲಂಚ ಪಡೆಯುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಒಬ್ಬ ಡಿಪೋ ಮ್ಯಾನೇಜರ್ ಸೇರಿದಂತೆ 7 ಮಂದಿಯನ್ನು ಅಮಾನತು ಮಾಡಿ ಎಂಡಿ ಸತ್ಯವತಿ ಆದೇಶ ಹೊರಡಿಸಿದ್ದಾರೆ.
ಬಿಎಂಟಿಸಿಯ ಘಟಕ- 33ರಲ್ಲಿ ಚಾಲಕರು ಮತ್ತು ನಿರ್ವಾಹಕರಿಗೆ ರಜೆ ನೀಡಲು ಇಂತಿಷ್ಟು ಎಂದು ಗೂಗಲ್ ಪೇ ಹಾಗೂ ಫೋನ್ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ ಚಾಲಕರಿಗೆ ಉತ್ತಮ ಗುಣಮಟ್ಟದ ಬಸ್‌ಗಳನ್ನು ನೀಡಲು ಲಂಚ ಕೊಡಬೇಕಿತ್ತು. ಅಷ್ಟೇ ಅಲ್ಲ ನಿರ್ದಿಷ್ಟ ರೂಟ್ ಕೊಡಲು ಭ್ರಷ್ಟ ಅಧಿಕಾರಿಗಳ ಕೈಬಿಸಿ ಮಾಡಬೇಕಿತ್ತು. ಈ ಬಗ್ಗೆ ನೌಕರರ ಸಂಘ ಉನ್ನತ ಅಧಿಕಾರಿಗಳಿಗೆ ದೂರು ನೀಡಿತ್ತು.
ಡಿಜಿಟಲ್‌ಪೇಮೆಂಟ್ ಮೂಲಕ ಲಂಚ: ದೂರನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರ ಸೂಚನೆ ಮೇರೆಗೆ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕಿ ರಮ್ಯಾ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು 4.50 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಲಂಚಾವತಾರ ನಡೆದಿರುವುದು ಸಾಬೀತಾಗಿದೆ.
ಈ ಆರೋಪ ಸಾಬೀತಾದ ಹಿನ್ನೆನೆಯಲ್ಲಿ ಘಟಕ ವ್ಯವಸ್ಥಾಪಕ ಸತ್ಯನಾರಾಯಣ, ಸಂಚಾರ ನಿಯಂತ್ರಕ ಗುರುಮೂರ್ತಿ, ರಂಜಿತ್, ಜೂನಿಯರ್ ಅಸಿಸ್ಟೆಂಟ್ ಧನಂಜಯ, ಶಬೀರ್, ಮೆಹಬೂಬ್ ಮತ್ತು ರವಿ ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ,
ಕಠಿಣ ಶಿಕ್ಷೆಗೆ ಸೂಚಿಸಿದ್ದೇನೆ ರಾಮಲಿಂಗಾರೆಡ್ಡಿ: ಪ್ರಾಮಾಣಿಕವಾಗಿ ಕೆಲಸ ಮಾಡುವ ಕಂಡಕ್ಟರ್ ಮತ್ತು ಡ್ರೈವರ್‌ಗಳಿಂದಲೇ ಲಂಚ ಪಡೆಯುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಭ್ರಷ್ಟಾಚಾರ ಸಾಬೀತಾಗಿರುವ ಕಾರಣಕ್ಕೆ 7 ಮಂದಿಯನ್ನು ಸೇವೆಯಿಂದ ಅಮಾನತು ಮಾಡಿದ್ದೇವೆ. ಇನ್ನೂ ಕಠಿಣ ಶಿಕ್ಷೆಗೆ ಸೂಚಿಸಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.