ಮೈಸೂರು: ದಸರಾ ವೇದಿಕೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ನಟ ವಶಿಷ್ಟ ಸಿಂಹ ಹೇಳಿದ್ದಾರೆ.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ಯುವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಿಮ್ಮಂತೆ ವೇದಿಕೆ ಮುಂದೆ ಕುಳಿತು ಯುವ ಸಂಭ್ರಮ ನೋಡುತ್ತಿದ್ದೆ. ಈ ವೇದಿಕೆಯಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದು ಎಂದು ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.
2004ರಲ್ಲಿ ಹಂಸಲೇಖ ಅವರ ಕಾರ್ಯಕ್ರಮಕ್ಕೆ ವಾಚ್‌ಮನ್ ಕೈಯಲ್ಲಿ ಹೊಡೆಸಿಕೊಂಡು ಬಂದಿದ್ದೆ. ಹಾಡಬೇಕು ಎಂದು ಅವರ ಬಳಿ ಹೇಳಿದ್ದೆ. ಅವರು ಬೆಂಗಳೂರಿಗೆ ಬಾ ಎಂದಿದ್ದರು. ಅವರ ಮಾತು ಕೇಳಿ ಬೆಂಗಳೂರಿಗೆ ಹೋಗಿದ್ದಕ್ಕೆ ಇಂದು ನನ್ನ ಜೀವನವೇ ಬದಲಾಗಿದೆ. ನೀವೂ ಸಹ ನಿಮಗೆ ಸಿಗುವ ವೇದಿಕೆ ಬಳಸಿಕೊಂಡು ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ನಟಿ ಹರಿಪ್ರಿಯಾ ಮಾತನಾಡಿ, ಮೈಸೂರೆಂದರೆ ನನಗೆ ತುಂಬಾ ಇಷ್ಟ. ಮೊದಲು ನಿಮ್ಮ ಮನೆ ಮಗಳಾಗಿ ಬರುತ್ತಿದ್ದೆ. ಈಗ ಸೊಸೆಯಾಗಿ ಬಂದಿದ್ದೇನೆ. ಶಾಲಾ ದಿನಗಳಿಂದಲೇ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅದಕ್ಕಾಗಿ ನಟಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಈ ಬಾರಿ ವೈಭವದಿಂದ ದಸರಾ ಆಯೋಜಿಸಲು ಚಿಂತಿಸಲಾಗಿತ್ತು. ಆದರೆ, ಪ್ರಕೃತಿ ನಮ್ಮ ನೆರವಿಗೆ ಬರಲಿಲ್ಲ. ಹೀಗಾಗಿ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಶೇ.42ರಷ್ಟು ಯುವಕರೇ ಇದ್ದಾರೆ. ದೇಶದ ಭವಿಷ್ಯ ನಿಂತಿರುವುದು ಯುವಕರ ಮೇಲೆ. ಯುವಕರ ಭವಿಷ್ಯ ರೂಪಿಸಿ, ಅವರ ಕನಸು ನನಸು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್.ಬಿ, ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಯುವ ಸಂಭ್ರಮ ಉಪಸಮಿತಿ ವಿಶೇಷಾಧಿಕಾರಿ ಹಾಗೂ ಎಸ್ಪಿ ಸೀಮಾ ಲಾಟ್ಕರ್, ಕಾರ್ಯಾಧ್ಯಕ್ಷೆ ಶೈಲಜಾ, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.