ಬಳ್ಳಾರಿ: ನಮ್ಮ ಜಿಲ್ಲೆಗಳಲ್ಲಿ ಇದೇನೂ ಜಾಸ್ತಿಯಾಗಲ್ಲ ಎಂಬ ಉದಾಸೀನ ಯಾವುದೇ ಕಾರಣಕ್ಕೂ ಮಾಡದಿರಿ; ಕೋವಿಡ್-19 ಕಬಂಧಬಾವು ದಿನೇದಿನೇ ವಿಸ್ತರಿಸಿಕೊಳ್ಳುತ್ತಿದ್ದು, ಉಭಯ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತಾಕ್ರಮಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರೆ.
ಹೊಸಪೇಟೆಯ ಅಮರಾವತಿ ಅತಿಥಿಗೃಹದಲ್ಲಿ ಕೋವಿಡ್-19 ಹಿನ್ನೆಲೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್-19 ಚಿಕಿತ್ಸೆಗೆ ಮತ್ತು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಡಿಸಿಎಂ, ಅಗತ್ಯಕ್ರಮಗಳನ್ನು ಏನೇನು ಕೈಗೊಳ್ಳಬೇಕೋ ಅವುಗಳನ್ನೆಲ್ಲವನ್ನು ಕೈಗೊಳ್ಳಿ ಎಂದರು.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗದಿರುವುದು ಅತ್ಯಂತ ಖುಷಿಯ ಸಂಗತಿ; ಹೊರಗಡೆಯಿಂದ ಬಂದ ಜನರ ಮೇಲೆ ತೀವ್ರನಿಗಾವಹಿಸಿ ಮತ್ತು ಆರೋಗ್ಯ ಏರುಪೇರಾದಲ್ಲಿ ಕೂಡಲೇ ಚಿಕಿತ್ಸೆ ಹಾಗೂ ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೇಳಿದ ಅವರು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸದಾ ಕಾರ್ಯಚರಿಸುವಂತೆ ನೋಡಿಕೊಳ್ಳಿ ಎಂದರು.
ಎಮರ್ಜೆನ್ಸಿ ಕೇಸ್ ಗಳನ್ನು ತುರ್ತುರವಾನಿಸುವುದಕ್ಕಾಗಿ ಪ್ರತಿ ತಾಲೂಕಿಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಟ್ಟುಕೊಳ್ಳಿ ಎಂದು ಕೊಪ್ಪಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ವಾರ್ಡ್ ವಾರು ತರಕಾರಿ ಪೂರೈಸುತ್ತಿರುವುದನ್ನು ಮುಂದುವರಿಸುವಂತೆ ಸೂಚಿಸಿದರು.
ಕೋವಿಡ್-19 ವಿಷಯದಲ್ಲಿ ಉಭಯ ಜಿಲ್ಲೆಗಳು ಅತ್ಯಂತ ಅಗತ್ಯ ಸಹಕಾರ ಹಾಗೂ ಸಮನ್ವಯದೊಂದಿಗೆ ಮುಂದುವರಿಯಬೇಕು. ಬಳ್ಳಾರಿ ಜಿಲ್ಲಾಡಳಿತವು ಕೊರೊನಾ ವಿಷಯದಲ್ಲಿ ಅತ್ಯಂತ ಸಮರ್ಪಕವಾದ ಮುಂಜಾಗ್ರತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಇನ್ನಿತರ ಕ್ರಮಗಳನ್ನು ಕೈಗೊಂಡಿದ್ದು,ಇದೇ ಮಾದರಿಯನ್ನು ಕೊಪ್ಪಳ ಕೂಡ ಅನುಸರಿಸಿ ಎಂದು ಕೊಪ್ಪಳ ಡಿಸಿ ಸುನೀಲ್ ಕುಮಾರ್ ಗೆ ಸೂಚಿಸಿದರು.
ಪಡಿತರ ಹೋಮ್ ಡೆಲಿವರಿ ಕೊಡಲು ಪ್ರಯತ್ನ
ಬಯೋ ಮೆಟ್ರಿಕ್, ಒಟಿಪಿ ಬಿಟ್ಟು ರಾಜ್ಯದಲ್ಲಿ ಪಡಿತರವನ್ನು ಮನೆಗೆ ನೇರವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಡಿಸಿಎಂ ಸವದಿ ತಿಳಿಸಿದರು.
ಸುಖಾಸುಮ್ನೆ ಇಂತಹ ಸಮಯದಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವರನ್ನು ಪೊಲೀಸರು ಹೊಡೆಯುತ್ತಿರುವುದು ಕಂಡುಬರುತ್ತಿದೆ. ಅದರ ಬದಲಾಗಿ ಅಂತವರನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ಒಂದು ದಿನ ಅನ್ನ ನೀರು ಕೊಡದೇ ಕೂಡಿಹಾಕಿ ಎಂದು ಡಿಸಿಎಂ ಸವದಿ ಸೂಚಿಸಿದರು.
ಅವರು ಎಲ್ಲಿದ್ದಾರೋ ಅಲ್ಲಿಯೇ ಇರಲಿ
ಹೊಟ್ಟೆಪಾಡಿಗಾಗಿ ದುಡಿಯಲು ಕೊಪ್ಪಳದವರು ಕೇರಳ, ಬೆಂಗಳೂರು, ಮಂಗಳೂರು ಸೇರಿದಂತೆ ಅನೇಕ ಕಡೆ ಹೋಗಿದ್ದಾರೆ; ಅವರು ಪ್ರತಿನಿತ್ಯ ವಾಪಸ್ ಬರಲು ಫೋನ್ ಮಾಡುತ್ತಿದ್ದು, ನಾವು ಬರುವುದಕ್ಕೆ ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್ ಡಿಸಿಎಂ ಸವದಿ ಅವರಲ್ಲಿ ಕೋರಿಕೊಂಡರು.
ಡಿಸಿಎಂ ಸವದಿ ಅದಕ್ಕುತ್ತರಿಸಿ ಅವರು ಈಗ ಎಲ್ಲಿದ್ದಿರೋ ಅಲ್ಲಿಯೇ ಇರಲು ಹೇಳಿ; ಅವರಿಗೆ ಊಟ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸಂಬಂಧಿಸಿದವರಿಗೆ ತಿಳಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಬಳ್ಳಾರಿ ಜಿಲ್ಲೆಯಲ್ಲಿ 16791 ಜನರಿಗೆ ತಪಾಸಣೆ ಮಾಡಲಾಗಿದೆ.32 ಸ್ಯಾಂಪಲ್ ಕಳುಹಿಸಲಾಗಿತ್ತು,6 ರಿಸಲ್ಟ್ ವೇಟಿಂಗ್ ಇವೆ; ಉಳಿದವು ನೆಗೆಟಿವ್ ಬಂದಿದೆ ಎಂದರು.
ಕೊಪ್ಪಳ ಜಿಲ್ಲಾಧಿಕಾರಿ ಸುನೀಲಕುಮಾರ್ ತಮ್ಮ ಜಿಲ್ಲೆಯಲ್ಲಿ ಕೈಗೊಂಡ ಸಿದ್ದತೆಗಳ ಕುರಿತು ವಿವರಿಸಿದರು.
ಸಚಿವ ಆನಂದಸಿಂಗ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಡೇಸೂಗುರು, ರಾಘವೇಂದ್ರ ಹಿಟ್ನಾಳ್, ಎಸ್ಪಿ ಸಿ.ಕೆ.ಬಾಬಾ ಇದ್ದರು.