ಪಾಂಡವಪುರ: ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರು ನಾಲೆಗೆ ಬಿದ್ದು ಐವರು ಜಲಸಮಾಧಿಯಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಬನ್ನಘಟ್ಟ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಕೆ.ಟಿ. ಕೃಷ್ಣಪ್ಪ, ಧನಂಜಯ, ಹುಚ್ಚಪ್ಪ ಹಾಗೂ ಮತ್ತಿಬ್ಬರು ಜಲಸಮಾಧಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪ ಎಂಬುವರಿಗೆ ಸೇರಿದ ಇಂಡಿಕಾ ಕಾರು (ಕೆ.ಎ.14, ಎ. 2457) ಮೈಸೂರಿನಿಂದ ನಾಗಮಂಗಲ ಕಡೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಅವಸರದಲ್ಲಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದ್ದಾನೆ ಈ ವೇಳೆಎ ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆ ಗೋಡೆಗೆ ಡಿಕ್ಕಿ ಹೊಡೆದಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ರಭಸದಿಂದ ಡಿಕ್ಕಿ ಹೊಡೆದು ನಾಲೆಗೆ ಬಿದ್ದಿದೆ. ಸಂಜೆ 4:45ರ ಸಮಯಕ್ಕೆ ಕಾರು ನಾಲೆಗೆ ಉರುಳಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಕಾರನ್ನು ಹೊರ ತೆಗೆಯುವ ಕಾರ್ಯಚರಣೆಗೆ ಇಳಿದರು. ರಾತ್ರಿ 9ರ ವೇಳೆಗೆ ಕಾರನ್ನು ನಾಲೆಯಿಂದ ಕ್ರೈನ್ ಮೂಲಕ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಯಶಸ್ವಿಯಾದರು. ಆದರೆ, ಕಾರಿನಲ್ಲಿದ್ದ ಯಾರನ್ನು ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ.
ಕೆ.ಆರ್.ಎಸ್.ನಿಂದ ನಾಲೆಗಳಿಗೆ ನಿನ್ನೆಯಿಂದಷ್ಟೇ ನೀರು ಹರಿಸಲಾಗಿಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೀರು ನಾಲೆಯಲ್ಲಿ ಹರಿಯುದ್ದು, ಮೇಲಿನಿಂದ ರಭಸವಾಗಿ ಕಾರು ಬಿದ್ದಿದ್ದರಿಂದ ನೋಡು ನೋಡುತ್ತಿದ್ದಂತೆ ನಾಲೆಯೊಳಗೆ ಮುಳುಗಿತ್ತು. ಸ್ಥಳೀಯರನ್ನು ಕೂಗಿಕೊಂಡರಾದರೂ ಮುಳುಗಿದ್ದ ಕಾರನ್ನು ಕಂಡು ಯಾರೂ ನಾಲೆಯೊಳಗೆ ಇಳಿಸುವ ಪ್ರಯತ್ನ ಮಾಡಲಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಪ್ರಯತ್ನ ಮಾಡಿದ ಬಳಿಕ ಕಾರನ್ನು ಹೊರತೆಗೆಯಲಾಯಿತು. ಆ ವೇಳೆಗಾಗಲೇ ಕಾರಿನ ಒಳಗಿದ್ದ ಐದೂ ಮಂದಿಯ ಶವವಾಗಿದ್ದರು. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಕಾರಿನೊಳಗೆ ಹೂವು, ಹಣ್ಣು ಇದ್ದು, ಯಾವುದೋ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ಸು ತೆರಳುತ್ತಿದ್ದರೆಂದು ಹೇಳಲಾಗಿದೆ. ಕಾರು ಉರುಳಿ ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಮೋಹನ್, ಪಾಂಡವಪುರ ಸಿಪಿಐ ವಿವೇಕಾನಂದ, ಗ್ರಾಮಾಂತರ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬನ್ನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆ ಆಳವಾಗಿದ್ದು, ಪಾಂಡವಪುರ ಕಡೆಯಿಂದ ಬರುವಾಗ ಇಳಿಜಾರಿನಿಂದ ಕೂಡಿದೆ. ಈ ಸ್ಥಳದಲ್ಲಿ ನಾಲೆಗೆ ಅಡ್ಡವಾಗಿ ಯಾವುದೇ ತಡೆಗೋಡೆಯನ್ನು ನಿರ್ಮಿಸಿಲ್ಲ. ಇದು ಅಪಾಯಕಾರಿ ಸ್ಥಳವಾಗಿರುವುದರಿಂದ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗಿದ್ದು, ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ವಾಹನಗಳು ನೇರವಾಗಿ ನಾಲೆಯೊಳಗೆ ಉರುಳಿ ಬೀಳುತ್ತವೆ.
ಈ ಹಿಂದೆಯೂ ಅನೇಕ ವಾಹನಗಳು ನಾಲೆಗೆ ಉರುಳಿರುವ ನಿದರ್ಶನಗಳಿವೆ. ಈ ಅಪಾಯವನ್ನು ಮನಗಂಡು ನಾಲೆ ಪಕ್ಕದ ರಸ್ತೆಗೆ ಬದಲಾಗಿ ಪಕ್ಕದಲ್ಲಿ ಪ್ರತ್ಯೇಕವಾಗಿ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅದು ಮುಗಿಯುವ ಹಂತದಲ್ಲಿದ್ದು, ಸೇತುವೆ ಸಂಚಾರಕ್ಕೆ ಮುಕ್ತವಾದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಭಾರಿ ಜನಸ್ತೋಮ ನಾಲಗೆ ಕಾರು ಹುರುಳಿ ಬಿದ್ದ ಸ್ಥಳದಲ್ಲಿ ಬಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಇನ್ನು ಇಂದು ಬೆಳಗ್ಗೆ ಮೃತರ ಕುಟುಂಬದವರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಪಟ್ಟುಹಿಡಿದು ಜನರು ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಪ್ರತಿಭಟನಾ ನಿರತರ ಮನವೊಲಿಸಿ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಹೇಳಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.