ಬೆಂಗಳೂರಿನಿಂದ ಹಾಸನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮಾರ್ಗ ಮಧ್ಯೆ ಇಳಿಯಲು ಬಂದಾಗ..!!
ಬೆಂಗಳೂರು: ಬೆಂಗಳೂರುನಿಂದ ಹಾಸನಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಹಾಸನಕ್ಕೆ ಟಿಕೆಟ್ ತೆಗೆದುಕೊಂಡಿದ್ದಾರೆ. ಆದರೆ, ಮಾರ್ಗ ಮಧ್ಯದಲ್ಲೇ ಇಳಿದು ಹೋಗುವುದಕ್ಕೆ ಬಂದಿದ್ದಾರೆ.
ಈ ವೇಳೆ ನೀವು ಎಲ್ಲಿಗೆ ಟಿಕೆಟ್ ಪಡೆದುಕೊಂಡಿದ್ದೀರಿ ಹೇಳಿ ಎಂದು ನಿರ್ವಾಹಕರು ಕೇಳಿದ್ದಕ್ಕೆ ನಿರ್ವಾಹಕರನ್ನೇ ತರಾಟೆಗೆ ತೆಗೆದುಕೊಂಡ ಮಹಿಳೆಯ ನಡೆ ಕೆಲ ಕಾಲ ಆತಂಕವನ್ನೇ ಸೃಷ್ಟಿ ಮಾಡಿತ್ತು.
ಇತ್ತ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಚಾಲಕ ಮತ್ತು ನಿರ್ವಾಹಕರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವಿಲ್ಲ. ಅವರಿಗೆ ಅರಿವು ಮೂಡಿಸುವುದಕ್ಕೆ ಸರ್ಕಾರ ಮುಂದಾಗಿಲ್ಲ. ಇದರಿಂದ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ.
ಇನ್ನು ಮಹಿಳೆಯರು ಇಳಿದುಕೊಳ್ಳಲು ಬಯಸುವ ನಿಲ್ದಾಣಗಳಲ್ಲಿ ಇಳಿಸದೆ ಹೋದರೆ ನಿರ್ವಾಹಕರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಅತ್ತ ಇಳಿಸಿದರೆ ನಿಗಮದ ತನಿಖಾ ಸಿಬ್ಬಂದಿ ಬಂದು ನೀನು ಹೆಚ್ಚುವರಿ ಟಿಕೆಟ್ ಹರಿದು ಸರ್ಕಾರಕ್ಕೆ ಮತ್ತು ಸಂಸ್ಥೆಯನ್ನು ವಂಚಿಸಲು ಹೊರಟಿದ್ದೀಯ ಎಂದು ಮೆಮೋ ಕೊಟ್ಟು ಬಳಿಕ ಅಮಾನತು ಮಾಡಿಸುತ್ತಾರೆ.
ಈ ಎಲ್ಲವನ್ನು ನೋಡಿದರೆ ಇಲ್ಲಿ ಚಾಲನಾ ಸಿಬ್ಬಂದಿ ಏನು ಕರ್ಮ ಮಾಡಿ ಈ ಕೆಲಸಕ್ಕೆ ಸೇರಿದ್ದೇವೋ ಎಂದು ತಮ್ಮನ್ನೇ ತಾವು ಶಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಚಾಲನಾ ಸಿಬ್ಬಂದಿಯ ಇಂಥ ಒತ್ತಡವನ್ನು ನಿವಾರಿಸುವುದಕ್ಕೆ ಈವರೆಗೂ ಯಾವುದೇ ಅಧಿಕಾರಿಗಳು ಮುಂದಾಗದಿರುವುದು ಬಹುತೇಕ ಎಲ್ಲ ನೌಕರರಲ್ಲೂ ಅಸಮಾಧಾನವನ್ನು ಉಂಟು ಮಾಡಿದೆ.
ಇಲ್ಲಿ ಚಾಲನಾ ಸಿಬ್ಬಂದಿಗೆ ಹಿಂಸೆ ಕೊಡುವುದನ್ನು ತಪ್ಪಿಸಿ, ಇಲ್ಲ ಈ ರೀತಿ ಮಾರ್ಗ ಮಧ್ಯೆ ಇಳಿದು ಹೋಗದಂತೆ ಮಹಿಳೆಯರಿಗೆ ಅರಿವು ಮೂಡಿಸಿ. ಈ ಎರಡರಲ್ಲಿ ಒಂದನ್ನಾದರೂ ಮಾಡಿದರೆ ಒಳ್ಳೆಯದಾಗುತ್ತದೆ.
ಈ ವಿಡಿಯೋದಲ್ಲಿ ಮಹಿಳೆ ನಿರ್ವಾಹಕರಿಗೆ ಎಷ್ಟು ಶಾಪ ಹಾಕುತ್ತಿದ್ದಾರೆ ಎಂಬುದನ್ನು ನೋಡಿ ಮತ್ತು ಕೇಳಿಸಿಕೊಳ್ಳಿ. ಇಲ್ಲಿ ನಿರ್ವಾಹಕರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಆದರೆ, ಅದನ್ನು ಮಹಿಳೆ ಎಷ್ಟರ ಮಟ್ಟಿಗೆ ವಿರೋಧಿಸಿದ್ದಾರೆ ಎಂಬುದು ಈ ವಿಡಿಯೋದಲ್ಲಿ ಕಾಣುತ್ತದೆ.
ಈ ರೀತಿ ಈ ಒಬ್ಬ ಮಹಿಳೆ ಮಾತ್ರ ನಡೆದುಕೊಳ್ಳುತ್ತಿಲ್ಲ. ಹಲವಾರು ಮಹಿಳೆಯರು ಹೀಗೆ ನಡೆದುಕೊಳ್ಳುತ್ತಿರುವುದರ ಬಗ್ಗೆ ಈಗಾಗಲೇ ಹತ್ತಾರು ವರದಿಗಳನ್ನು ವಿಜಯಪಥ ಮಾಡಿದೆ. ಆದರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ದುರಂತ. ಇನ್ನಾದರೂ ಮಹಿಳೆಯರಿಗೆ ಅರಿವು ಮೂಡಿಸಿ.
ಒಂದು ವೇಳೆ ಅರಿವು ಮೂಡಿಸುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಸಂದರ್ಭಕ್ಕೆ ಅನುಗುಣವಾಗಿ ಮಹಿಳೆಯರು ಇಳಿದು ಹೋಗುವುದಕ್ಕೆ ಅವಕಾಶ ಮಾಡಿಕೊಡುವಂತೆ ಒಂದು ಆದೇಶವನ್ನಾದರೂ ಮಾಡಿ. ಇಲ್ಲದಿದ್ದರೆ ಈಗಾಗಲೇ ಹಲವಾರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಚಾಲನಾ ಸಿಬ್ಬಂದಿ ಜೀವಕ್ಕೆ ಹಾನಿಯಾಗಲಿದೆ. ಹೀಗಾಗಿ ಇದನ್ನು ತಪ್ಪಿಸಲು ಮುಂದಾಗಿ ಎಂದು ನೊಂದ ನೌಕರರು ಮನವಿ ಮಾಡಿದ್ದಾರೆ.