ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಮತ್ತು ವಿದ್ಯುತ್ ಕ್ಷಾಮ ಹೆಚ್ಚಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ನಾವು ಈ ರಾಜ್ಯದ ಸಿಎಂ ಎಂಬುದನ್ನೇ ಮರೆತು ಐಶಾರಾಮಿ ಜೀವನ ನಡೆಸುವ ಮೂಲಕ ಶೋಕಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆ.ಪಿ. ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ನಿವಾಸದಲ್ಲಿ ಹೊಸದಾಗಿ ಕಾನ್ಫ್‌ರೆನ್ಸ್ ಹಾಲ್ ಮಾಡಿಕೊಂಡಿದ್ದಾರೆ. ಅದಕ್ಕೆ 3 ಕೋಟಿ ರೂ.ಗಳಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಈ ಹಣ ಯಾರದ್ದು ಜನರ ದುಡ್ಡು ಖರ್ಚು ಮಾಡಿ ಈ ರೀತಿ ಶೋಕಿ ಮಾಡುವುದಕ್ಕೆ ಮುಂದಾಗಿದ್ದಾರಲ್ಲ ಈದೇ ಹಣವನ್ನು ಬೆಳೆ ಇಲ್ಲದೆ ಬಳಲುತ್ತಿರುವ ರೈತರುಗೆ ಕೊಟ್ಟಿದ್ದರೆ ಅದು ಎಷ್ಟು ಉಪಯೋಗಕ್ಕೆ ಬರುತ್ತಿತ್ತು.
ಇನ್ನು ಅದರ ಜತೆಗೆ ಕಾವೇರಿ ನಿವಾಸಕ್ಕೆ 1.90 ಕೋಟಿ ರೂ. ಬೆಲೆ ಬಾಳುವ ಸ್ಟ್ಯಾನ್ಲಿ ವಿದೇಶಿ ಬ್ರಾಂಡಿನ ಸೋಫಾ ಸೆಟ್, ಕಾಟ್ ಮಾಡಿಸಿಕೊಂಡಿದ್ದಾರೆ. ಇದಕ್ಕೆ ಸರ್ಕಾರದಿಂದ ಹಣ ನೀಡಲಾಗಿಲ್ಲವೇ ಹಾಗಾದರೆ ಅದಕ್ಕೆ ಹಣ ಕೊಟ್ಟವರು ಯಾರು? ಇಂಥ ಐಶಾರಾಮಿ ಸೋಫಾ, ಕಾಟ್‌ಗಳನ್ನು ಬಳಸುವ ವ್ಯಕ್ತಿ ಸಮಾಜವಾದಿನಾ ಎಂದು ಪ್ರಶ್ನಿಸಿದರು.
ಅಲ್ಲದೆ ನನಗೆ ಬಂದಿರುವ ಮಾಹಿತಿ ಪ್ರಕಾರ ಯಾರೋ ಸಚಿವರೊಬ್ಬರ ಕಡೆಯವರು ಅದನ್ನೆಲ್ಲ ಮಾಡಿಸಿದ್ದಾರಂತೆ. ಅದೆನ್ನೆಲ್ಲ ನೋಡುತ್ತಿದ್ದರೆ ಇದು ಹ್ಯುಬ್ಲೆಟ್ ವಾಚ್‌ನ ಅಪ್ಡೇಟೆಡ್ ವರ್ಷನ್ ಥರಾ ಕಾಣುತ್ತಿದೆ. ರೈತರ ಜನರ ಹಿತ ಬಿಟ್ಟು ಇವರಿಗೆ ಎಂಜಾಯ್ ಮಾಡುವುದಕ್ಕೆ ಈ ರೀತಿಯ ಎಲ್ಲ ಸೌಲಭ್ಯಗಳು ಬೇಕು ಅಲ್ಲವೇ ಎಂದು ವ್ಯಂಗ್ಯವಾಡಿದರು.
ಇನ್ನು ಬರಕ್ಕಿಂತ ಕಾರುಗಳನ್ನು ಖರೀದಿ ಮಾಡಿಸಲಿಕ್ಕೆ, ಸಚಿವರ ನಿವಾಸಗಳನ್ನು ಡೆಕೋರೇಟ್ ಮಾಡೋಕೆ ಹಣ ಖರ್ಚು ಮಾಡುವುದರಲ್ಲೇ ಸರ್ಕಾರದ ಖಜಾನೆಯನ್ನು ಖಾಲಿ ಮಾಡುತ್ತಿದ್ದಾರೆ. ಹೀಗಿರುವಾಗ ಬಡಪಾಯಿ ರೈತರಿಗೆ ಕೊಡಲಿಕ್ಕೆ ಇವರ ಬಳಿ ಹಣ ಇಲ್ಲ. ಅದು ಎಲ್ಲಿಂದ ಬರಬೇಕು ಅಲ್ಲವೆ. ಅವರು ಬಡ ರೈತರಲ್ಲವೇ ಅವರಿಂದ ಸರ್ಕಾರಕ್ಕೆ ಏನು ಲಾಭವಿದೆ ಎಂಬ ಲೆಕ್ಕಾಚಾರದಲ್ಲಿ ಇರುವುದು ದುರಂತವೆ ಸರಿ ಎಂದು ಕಿಡಿಕಾರಿದ್ದಾರೆ.
ಇತ್ತ ಮಂತ್ರಿಗಳ ಮನೆ ಸಿಂಗಾರಕ್ಕೆ ಹತ್ತು ಕೋಟು ರೂ. ಖರ್ಚು ಮಾಡುತ್ತಿದ್ದಾರೆ. ನಾನು ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಇಂಥ ಖರ್ಚಿಗೆ ಒಂದು ರೂಪಾಯಿ ಕೊಡುತ್ತಿರಲಿಲ್ಲ. ಒಂದು ಕಾರು ಖರೀದಿ ಮಾಡಲು ಬಿಡಲಿಲ್ಲ ಎಂದ ಕುಮಾರಸ್ವಾಮಿ, ಇವರಿಂದ ರಾಜ್ಯದ ಜನ ಉದ್ದಾರವಾದಂತೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.