ಮೈಸೂರು: ಕಬ್ಬಿನ ದರ ನಿಗದಿ ಮತ್ತು ರೈತರ ಸಮಸ್ಯೆ ನಿವಾರಿಸಲು ಆಗ್ರಹಿಸಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರನ್ನು ಬೆಳ್ಳಂಬೆಳಗ್ಗೆ ಮೈಸೂರು ಜಿಲ್ಲಾ ಗ್ರಾಮಾಂತರ ಪೊಲೀಸರು ಕಾನೂನು ಬಾಹಿರವಾಗಿ ಬಂಧಿಸಿರುವುದನ್ನು ಖಂಡಿಸಿ ಮೈಸೂರಿನ ನ್ಯಾಯಾಲಯದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಮೈಸೂರು – ಚಾಮರಾಜನಗರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇಂದು (ಶುಕ್ರವಾರ) ಬೆಳಗಿನ ಜಾವ ರೈತ ಮುಖಂಡರ ಬಂಧನ ಮಾಡಿ ಠಾಣೆಯಲ್ಲಿರಿಸಿಕೊಂಡಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ನಡೆಯನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಇಂದು 11.30ಕ್ಕೆ ಮೈಸೂರಿನ ನ್ಯಾಯಾಲಯದ ಮುಂಭಾಗ ಧರಣಿ ನಡೆಸಲಾಗುತ್ತಿದೆ. ಅಲ್ಲದೆ ರೈತರ ಬಂಧನ ಖಂಡಿಸಿ ಚಾಮರಾಜನಗರದ ಹುಡಿಗಾಲದಲ್ಲಿ ಈಗಾಗಲೇ ರೈತರು ರಸ್ತೆ ತಡೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರೈತರ ಮುಖಂಡರ ಬಂಧನ ಖಂಡಿಸಿ ಕೂಡಲೇ ಬಿಡುಗಡೆ ಮಾಡುವಂತೆ ಬನ್ನೂರು ಪೊಲೀಸ್ ಠಾಣೆಯ ಮುಂದೆ ನೂರಾರು ರೈತರು ಜಮಾಯಿಸಿದ್ದು, ರಸ್ತೆ ತಡೆ ಚಳವಳಿ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲಾ ಗ್ರಾಮಾಂತರ ಪೊಲೀಸರು ರೈತ ಮುಖಂಡರ ಬಂಧನವನ್ನು ಕಾನೂನು ಬಾಹಿರವಾಗಿ ಮಾಡಿದ್ದಾರೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದ್ದಾರೆ.
ಎಲ್ಲೆಲ್ಲಿ ಬಂಧನ: ಕಬ್ಬಿನ ದರ ನಿಗದಿ ಮತ್ತು ರೈತರ ಸಮಸ್ಯೆ ನಿವಾರಿಸಲು ಆಗ್ರಹಿಸಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರನ್ನು ಬೆಳಗ್ಗೆ ಮೂರು ಗಂಟೆಯಿಂದಲೇ ಮೈಸೂರು ಜಿಲ್ಲೆಯ ಜೈಯಪುರ ಪೊಲೀಸ್ ಠಾಣೆಯವರು ಬರಡನಪುರ ನಾಗರಾಜ್ ಅವರನ್ನು ಬಂಧಿಸಿದ್ದಾರೆ.
ಬನ್ನೂರು ಪೊಲೀಸ್ ಠಾಣೆಯವರು ಅತ್ತಹಳ್ಳಿ ದೇವರಾಜ್ ಅವರನ್ನು, ತಿ.ನರಸೀಪುರ ಪೊಲೀಸ್ ಠಾಣೆಯವರು ಕಿರುಗಸುರ ಶಂಕರ್, ಕುರುಬೂರು ಸಿದ್ದೇಶ್, ಪ್ರಸಾದ್, ನಾಯ್ಕ್, ಅಪ್ಪಣ್ಣ, ನಿಂಗರಾಜ್ ಅವರನ್ನು ಅಕ್ರಮವಾಗಿ ಬಂಧಿಸಿದ್ದಾರೆ.
ಇನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯವರು ಹಾಲಿನ ನಾಗರಾಜ್ ಅವರನ್ನು ಬಂಧಿಸಿದ್ದು, ಹೀಗೆ ಆಯಾಐ ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮ ಎಂದು ಮಧ್ಯರಾತ್ರಿ ಮೂರು ಗಂಟೆಯಿಂದಲೇ ರೈತ ಮುಖಂಡರ ಬಂಧನ ಮಾಡಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.
ಸರ್ಕಾರ ರೈತರ ಚಳವಳಿ ಹತ್ತಿಕಲು ರೈತರ ಚಳವಳಿ ದಮನ ಮಾಡಲು ಪೊಲೀಸ್ ಇಲಾಖೆ ಮೂಲಕ ಯತ್ನಿಸುತ್ತಿದೆ. ಯಾತಕ್ಕಾಗಿ ಬಂಧನ ಎಂದು ಪ್ರಶ್ನೆ ಮಾಡಿದರೆ ಸ್ಥಳೀಯ ಪೊಲೀಸರು ಸಮರ್ಪಕ ಉತ್ತರ ನೀಡುತ್ತಿಲ್ಲ. ಇದು ದಬ್ಬಾಳಿಕೆಯ ವರ್ತನೆ. ಕೂಡಲೇ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಸ್ತೆ ಕಡೆ ಚಳವಳಿಗೆ ಹಳ್ಳಿ ಹಳ್ಳಿಗಳಲ್ಲೂ ಕರೆ ನೀಡಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ಎಚ್ಚರಿಸಿದ್ದಾರೆ.
ಇಂದು ಬೆಳಗಿನ ಜಾವ 3 40 ಕ್ಕೆ ಬನ್ನೂರು ಪೊಲೀಸರು ನಮ್ಮ ಮನೆಗೆ ಬಂದು ನನ್ನುನು ವಶಕ್ಕೆ ಪಡೆದು ಬನ್ನೂರು ಆರಕ್ಷಕ ಠಾಣೆಗೆ ಕರೆದೊಯ್ದರು. ಕಾರಣ ಕೇಳಿದ್ದಕ್ಕೆ ಇಂದು ,ನಾಳೆ ಜಿಲ್ಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಇದೆ. ನೀವು ಮತ್ತು ನಿಮ್ಮ ಸಂಘಟನೆಯವರು ಅವರ ಕಾರ್ಯ ಕ್ರಮಗಳಿಗೆ ಅಡ್ಡಿ ಪಡಿಸುವುದಾಗಿ ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ನಿಮ್ಮನ್ನು ವಶಕ್ಕೆ ಪಡೆಯಲು ನಮ್ಮ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ. ನಿಮ್ಮನ್ನು ಮೈಸೂರಿನ ಆರಕ್ಷಕ ಅಧೀಕ್ಷಕರ ಬಳಿ ಕರೆದೊಯ್ಯು ತ್ತೇವೆ ಎಂದು ಮೈಸೂರಿನ D A R ಗ್ರೌಂಡ್ ನಲ್ಲಿ ಇರಿಸಿದ್ದಾರೆ.
l ಅತ್ತಹಳ್ಳಿ ದೇವರಾಜ್, ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ