ಮಾಲೂರು: ಆಮ್ ಆದ್ಮಿ ಪಾರ್ಟಿ ಅಂದರೆ ಜನ ಸಾಮಾನ್ಯರ ಪಕ್ಷ. ಆದರೆ ಈ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷ ಗಳಂತೆ ವೈಭವೀಕರಿಸಿ ಕೋಟಿಗಟ್ಟಲೆ ದುಡ್ಡು ಖರ್ಚು ಮಾಡಿ ಪ್ರಚಾರ ಮಾಡುವುದಾಗಲಿ, ಹಬ್ಬ ಮಾಡುವುದಾಗಲಿ, ಹಣ ನೀಡಿ ಮತ ಹಾಕಿ ಎಂದು ಕೇಳುವುದು ನಮ್ಮ ಪಕ್ಷದ ಉದ್ದೇಶವಲ್ಲ. ಕಡಿಮೆ ಖರ್ಚಿನಲ್ಲಿ ಚುನಾವಣೆ ನಡೆಸುವುದು ಹೇಗೆಂದು ತೋರಿಸಿಕೊಡುವುದು ನಮ್ಮ ಉದ್ದೇಶ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣವನ್ನು ಯಾರೂ ಮಾಡಬಾರದು ಎಂದರು.
ಇನ್ನು ಎಲ್ಲ ಪಕ್ಷಗಳು ಸೇರಿ ಸುಮಾರು 75 ವರ್ಷದಿಂದ ಅಧಿಕಾರ ಮಾಡಿದ್ದಾರೆ. ಆದರೆ, ಅಭಿವೃದ್ಧಿ ಕಂಡಿದ್ದೇವಾ? ಇಲ್ಲ. ‘ಮೊದಲೆಲ್ಲಾ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಹೇಳುತ್ತಿದ್ದೇವು. ಆದರೆ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಭಾರತ ಬಿಟ್ಟು ತೊಲಗಿ’ ಎಂದು ಕೇಳಿಕೊಳ್ಳುವ ಸಂದರ್ಭ ನಮಗೆ ಬಂದಿದೆ ಎಂದರು.
ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷ ನಂಬಿ ಅಥವಾ ಅವರ ಗ್ಯಾರಂಟಿಗಳ ಮೇಲಿನ ಭರವಸೆಯಿಂದ ಕಾಂಗ್ರೆಸ್‌ಗೆ ಮತ ಹಾಕಿಲ್ಲ. ಬದಲಾಗಿ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರದಿರಲಿ ಎಂದು ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. 75 ವರ್ಷಗಲ್ಲಿ ಮೂರು ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರ ನಡೆಸಿದ್ದಾರೆ. ಈ ಪಕ್ಷಗಳು ನೀಡಿರುವ ಆಡಳಿತ ನಿಮಗೆ ತೃಪ್ತಿ ತಂದಿದೆಯಾ ಎಂದು ಪ್ರಶ್ನಿಸಿದರು.
ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ನೇರವಾಗಿ ಜನರ ಜತೆ ಸಂಪರ್ಕ ಇಟ್ಟುಕೊಂಡು, ಚರ್ಚೆ ಮಾಡಿ ರಾಜ್ಯಕ್ಕೆ ದೇಶಕ್ಕೆ ಏನು ಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಅರಳಿಕಟ್ಟೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
‘ಮತದಾನ ಒಂದು ಶ್ರೇಷ್ಠವಾದ ಸ್ಥಾನವಾಗಿದ್ದು, ಆ ಶ್ರೇಷ್ಠ ಸ್ಥಾನವನ್ನು ಒಳ್ಳೆಯವರಿಗೆ ಕೊಡಿ. ಕಾಂಗ್ರೆಸ್ ಮಾಡುತ್ತಿರುವುದು ಸರ್ವಾಧಿಕಾರಿ ಆಡಳಿತ. ನಾವು ಈಗ ಬಂದಿರುವುದು ಆರೋಗ್ಯಕರ ವಾತಾವಾರಣ ಮತ್ತು ಆರೋಗ್ಯಕರ ಆಡಳಿತ ನೀಡುವವರನ್ನು ಉತ್ತೇಜಿಸಿ ಎಂದು ಹೇಳುವುದಕ್ಕೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಒಂದು ಒಳ್ಳೆಯ ಪಕ್ಷವನ್ನು ಆಯ್ಕೆ ಮಾಡಿ ಎಂದು ನಾವು ನಿಮ್ಮಲಿ ಕೇಳಿಕೊಳ್ಳುತ್ತೇವೆ ಎಂದರು.
ಆಮ್ ಆದ್ಮಿ ಪಕ್ಷದ ದಕ್ಷಿಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿಯಾದ ನಾಗಣ್ಣ ಮಾತನಾಡಿ, ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಏಕೆ ನಾವು ಮತ ಚಲಾಯಿಸುತ್ತೇವೆ ಎಂಬುದೆ ಯಾರಿಗೂ ಗೊತ್ತಿಲ್ಲ. ಸಮಸ್ಯೆಗಳನ್ನು ಪರಿಹಾರ ಮಾಡಬೇಕಾಗಿರುವುದು ಸರ್ಕಾರಗಳು ಮತ್ತು ಸರ್ಕಾರ ನಡೆಸುವ ರಾಜಕಾರಣಿಗಳು ಆದರೆ, ನಾವು ಆಯ್ಕೆ ಮಾಡುತ್ತಿರುವ ರಾಜಕಾರಣಿಗಳ ಆಡಳಿತದ ಗುಣಮಟ್ಟ ಕಳಪೆಯಾಗಿದೆ ಎಂದರೆ ತಪ್ಪೇನಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ,ಕೋಲಾರದ ಮಾಜಿ ಸಂಸದ ಹಾಗೂ ಪಕ್ಷದ ಉಪಾಧ್ಯಕ್ಷ ಡಾ. ವೆಂಕಟೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹಾಗೂ ಮಾಲೂರು ತಾಲ್ಲೂಕು ಅಧ್ಯಕ್ಷ ರೇವಣ್ಣ ಇದ್ದರು.