ಶ್ರೀರಂಗಪಟ್ಟಣ : ಸರಿಯಾದ ಸಮಯಕ್ಕೆ ಬಸ್‌ಗಳು ಬರದೆ ಶಾಲಾ- ಕಾಲೇಜಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು ಗ್ರಾಮಸ್ಥರ ಜೊತೆಗೂಡಿ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ರಸ್ತೆ ತಡೆ ನಡೆಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಜನಪ್ರತಿನಿಧಿಗಳು ಮತ್ತು ಸಾರಿಗೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊಡಿಯಾಲ ಗ್ರಾಮ ಸೇರಿ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಿತ್ಯ ಮೈಸೂರು ಮಂಡ್ಯದ ವಿವಿಧ ಶಾಲಾ- ಕಾಲೇಜುಗಳಿಗೆ ತರಳುತ್ತಾರೆ. ಆದರೆ ಸಕಾಲದಲ್ಲಿ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಬಸ್‌ಗಳು ಬಂದರೂ ಸಹ ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಂದಾಗುತ್ತಿಲ್ಲ, ವಿದ್ಯಾರ್ಥಿಗಳ ಜತೆ ಉಡಾಫೆಯಾಗಿ ವರ್ತಿಸುತ್ತಾರೆ. ನಿಲ್ದಾಣಗಳಲ್ಲಿ ನಿಲುಗಡೆ ಮಾಡದೆ ಸ್ವಲ್ಪ ದೂರ ಮುಂದೆ ಹೋಗಿ ನಿಲ್ಲಿಸುತ್ತಾರೆ. ಅಲ್ಲದೆ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿದ್ದಾರೆ ಎಂದು ನಿಲ್ಲಿಸದೆ ಹೋಗುತ್ತಾರೆ ಎಂದು ಅಳಲು ತೋಡಿಕೊಂಡರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಕೆಗೆ ಮುಂದಾದರೂ ಸಹ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಬಸ್‌ಗಳು ಸಕಾಲಕ್ಕೆ ಬರುವಂತೆ ನೋಡಿಕೊಳ್ಳಲಾಗುವುದು ಅಷ್ಟೇ ಅಲ್ಲದೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆ ತಡೆ ವಾಪಸ್ ಪಡೆದರು.