ಮಂಡ್ಯ: ಆನೆಗಳ ಹಿಂಡುಗಳ ದಾಳಿಗೆ ಸಿಲುಕಿದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಿನ್ನೆ ಬೆಳ್ಳಂ ಬೆಳಗ್ಗೆ ನಡೆದಿದೆ.
ಲಾಳನಕೆರೆ ಲೇ. ಸಿದ್ದಪ್ಪ ಎಂಬುವರ ಪತ್ನಿ ಸಾಕಮ್ಮ 50 ಆನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ ಕಾರ್ಮಿಕ ಮಹಿಳೆ ಯಾಗಿದ್ದಾರೆ. ಭಾನುವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಜಮೀನಿನ ಬಳಿ ಕೆಲಸಕ್ಕೆ ಹೋಗಿದ್ದಾಗ ಸಲಗಳು ದಾಳಿ ಮಾಡಿದ್ದು ಅವುಗಳಿಂದ ತಪ್ಪಿಸಲಿಕೊಳ್ಳು ಸಾಧ್ಯವಾಗದೆ ಅವುಗಳ ದಾಳಿಗೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಸಾಕಮ್ಮ ಪೀಹಳ್ಳಿ ಗ್ರಾಮದ ಮಾಲೀಕ ರೋಬ್ಬರ ಜಮೀನಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದರು. ಇವರ ಜತೆ ಎಂಟಕ್ಕೂ ಹೆಚ್ಚು ಮಂದಿ ಕೂಲಿ ಕೆಲಸಕ ಮಾಡುತ್ತಿದ್ದರು, ಆನೆ ಪ್ರತ್ಯಕ್ಷವಾಗಿರುವ ಬಗ್ಗೆ ಯಾವುದೇ ಸುಳಿವು ಇಲ್ಲದ ಹಿನ್ನೆಲೆಯಲ್ಲಿ ಭಯವಿಲ್ಲದೆ ಕೆಲಸ ಮಾಡುತ್ತಿದ್ದರು.
ಆದರೆ, ಕಬ್ಬಿನ ಗದ್ದೆಯಲ್ಲಿ ಬಿಡು ಬಿಟ್ಟಿದ್ದ ಆನೆಗಳ ಹಿಂಡಿನಲ್ಲಿದ್ದ ಸಲಗವೊಂದು ಸಾಕಮ್ಮ ಸೇರಿ ಮಹಿಳೆಯರ ಮೇಲೆ ದಾಳಿ ಮಾಡಿವೆ. ಆ ವೇಳೆ ತಪ್ಪಿಸಿಕೊಳ್ಳಲು ಸಾಕಮ್ಮ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಇತರ ಕಾರ್ಮಿಕರು ಪಾರಾಗಿದ್ದಾರೆ.
ದುರಂತ ನಡೆದ ಹಿನ್ನೆಲೆಯಲ್ಲಿ ನೂರಾರು ಜನರು ಸ್ಥಳದಲ್ಲಿ ಜಮಾವಣೆಗೊಂಡು ಕಬ್ಬಿನ ಗದ್ದೆಯಲ್ಲೇ ಬಿಡು ಬಿಟ್ಟಿರುವ ಆನೆಗಳ ಹಿಂಡು ಓಡಿಸಲು ಪ್ರಯತ್ನಿಸಿದರು. ಹಲವರು ಕಲ್ಲು ತೂರಿದರು. ಅಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಗಳ ಮೇಲೆ ಕಲ್ಲು ತೂರದಂತೆ ಮತ್ತು ಅವುಗಳ ಸಮೀಪ ಹೋಗದಂತೆ ಮನವಿ ಮಾಡಿದರು. ಆದರೂ ರೊಚ್ಚಿಗೆದ್ದ ಜನತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.