ದಾವಣಗೆರೆ: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಆರೋಪದಲ್ಲಿ ಪೋಕ್ಸೋ ಕೇಸ್‌ನಲ್ಲಿ ಚಿತ್ರದುರ್ಗದ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. 2ನೇ ಕೇಸ್‌ನಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಶಿವಮೂರ್ತಿ ಶರಣರನ್ನು ಬಂಧಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶದ ಹಿನ್ನೆಲೆ ದಾವಣಗೆರೆಯ ವಿರಕ್ತ ಮಠಕ್ಕೆ ಪೊಲೀಸರು ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಮುರುಘಾ ಶ್ರೀಗಳನ್ನ ಪೊಲೀಸರು ಬಂಧಿಸಿದ್ದಾರೆ.
ಮೊದಲನೇ ಪೋಕ್ಸೋ ಕೇಸ್‌ನಲ್ಲಿ ಬೇಲ್ ಪಡೆದು ಬಿಡುಗಡೆಯಾದ ಮೇಲೆ ಮುರುಘಾ ಶ್ರೀಗೆ 2ನೇ ಕೇಸ್‌ನಲ್ಲಿ ಸಂಕಷ್ಟ ಎದುರಾಗಿದೆ. ಎರಡನೇ ಕೇಸ್ ಸಂಬಂಧ ಶಿವಮೂರ್ತಿ ಶರಣರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ಬಗ್ಗೆ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಇತ್ತೀಚೆಗೆ 1ನೇ ಪೊಕ್ಸೋ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಜೈಲಿನಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಎರಡೂ ಕಡೆಯ ವಾದ ಆಲಿಸಿರುವ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ. ಈ ಮೂಲಕ 2ನೇ ಪ್ರಕರಣದಲ್ಲಿ ನಿರ್ಧಾರ ಪ್ರಕಟಿಸಿದೆ.
ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ ಅವರು ಕೋರ್ಟ್‌ಗೆ ಆಗಮಿಸಿದ್ದು, ಕೋರ್ಟ್ ಆದೇಶ ಪಡೆದುಕೊಂಡ ಬಳಿಕ ದಾವಣಗೆರೆ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀ ಅವರನ್ನು ಬಂಧಿಸಿದರು.
ಪ್ರಕರಣವೇನು?: ಚಿತ್ರದುರ್ಗ ಮಠದ ವಸತಿ ಶಾಲೆಯ ಬಾಲಕಿಯರಿಬ್ಬರು ಆಗಸ್ಟ್ 26ರಂದು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ತೆರಳಿ ಶರಣರ ವಿರುದ್ಧ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಎದುರು ಸಂತ್ರಸ್ತ ಬಾಲಕಿಯರನ್ನು ಹಾಜರುಪಡಿಸಿ ಹೇಳಿಕೆ ಪಡೆದ ಬಳಿಕ ಶರಣರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಆ ನಂತರದ ಬೆಳವಣಿಗೆಯಲ್ಲಿ ಪ್ರಕರಣವನ್ನು ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ವಾಮೀಜಿ, ವಾರ್ಡನ್, ಕಾರ್ಯದರ್ಶಿ, ವಕೀಲ, ಮಠದ ಉತ್ತರಾಧಿಕಾರಿ ಸೇರಿ ಐವರ ವಿರುದ್ಧ ಆರೋಪ ಮಾಡಲಾಗಿತ್ತು. ಬಳಿಕ ಪೊಕ್ಸೊ ಪ್ರಕರಣದ ಅಡಿಯಲ್ಲಿ ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು.
ಒಡನಾಡಿ ಸಂಸ್ಥೆ ಅಸಮಾಧಾನ : ಮುರುಘಾ ಶ್ರೀಗಳಿಗೆ ಜಾಮೀನು ವಿಚಾರವಾಗಿ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ವಕೀಲರ ಜತೆ ಚರ್ಚೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ.
ಈ ಪ್ರಕರಣದಲ್ಲಿ ಕೆಲವು ಲೋಪದೋಷಗಳು ಕಾಣುತ್ತಿವೆ. ಪೊಲೀಸರ ಚಾರ್ಜ್ಶೀಟ್ ಸಲ್ಲಿಸುವ ವೇಳೆ ಲೋಪವಾಗಿದೆ. ಹೀಗಾಗಿ ಜಾಮೀನು ಸಿಕ್ಕಿದೆ. ಜೈಲಿನಲ್ಲಿದುಕೊಂಡೇ ಸ್ವಾಮೀಜಿಗಳು ಪ್ರಭಾವ ಬೀರಿದ್ದಾರೆ. ಚಿತ್ರದುರ್ಗಕ್ಕೆ ಹೋಗಬಾರದು ಎಂದು ನ್ಯಾಯಾಲಯ ಹೇಳಿರುವುದು ಸ್ವಾಗತಾರ್ಹ. ಈ ಪ್ರಕರಣದಲ್ಲಿ ಚಿಕ್ಕ ಮಕ್ಕಳು ಸಾಕಷ್ಟು ನೊಂದಿದ್ದು, ಅವರ ಪರವಾಗಿ ನಾವಿದ್ದೇವೆ. ಮುರಘಾ ಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗೇ ಆಗುತ್ತದೆ ಎಂದಿದ್ದಾರೆ.