ಬೆಂಗಳೂರು: ಈ ಬಾರಿ ಮುಂಗಾರಿನಲ್ಲಿ ಕೈಕೊಟ್ಟಿದ್ದ ವರುಣ ಹಿಂಗಾರಿನಲ್ಲಿ ಸ್ವಲ್ಪ ಮಟ್ಟಿಗೆ ಕೈ ಹಿಡಿಯಲು ಮುಂದಾಗಿದ್ದಾನೆ ಎಂದೇ ಹೇಳಬಹುದಾಗಿದೆ. ಏಕೆಂದರೆ, ಈಗಾಗಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ.
ಹೌದು! ಕಳೆದೊಂದು ವಾರದಿಂದ ಹಿಂಗಾರು ಮಳೆ ಆರಂಭವಾಗಿದ್ದು, ರಾಜ್ಯದ ಹಲವೆಡೆ ಈಗಾಗಲೇ ಮಳೆಯಾಗುತ್ತಿದೆ. ಅದೇ ರೀತಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಮುಂದಿನ 24 ಗಂಟೆಗಳಲ್ಲಿ ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ತೊಂಡೆಭಾವಿ, ಈಗಾಗಲೇ ಧರ್ಮಸ್ಥಳ, ಸೋಮವಾರಪೇಟೆ, ವಿರಾಜಪೇಟೆ, ಗೌರಿಬಿದನೂರು, ಅರಕಲಗೂಡು, ಬಂಡೀಪುರ, ಕೊಣನೂರು, ಕುಣಿಗಲ್ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.
ಇನ್ನು ಕರಾವಳಿ ಜಿಲ್ಲೆಗಳಲ್ಲಿಯೂ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು (ನವೆಂಬರ್ 24) ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆ ಆರಂಭವಾಗಿದೆ.
ಇದಿಷ್ಟೇ ಅಲ್ಲದೆ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಎರಡು ದಿನಗಳ ನಂತರವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ತುಸು ದುರ್ಬಲಗೊಂಡರು ಸಹಿತ ಮತ್ತೆ ಡಿಸೆಂಬರ 1ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡು ಹಾಗೂ ಕೇರಳ ಭಾಗದ ಸಮುದ್ರ ಮೇಲ್ಮೈ ಮಟ್ಟಕ್ಕಿಂತ 3.1 ಕಿಲೋ ಮೀಟರ್ ಸುಳಿಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬಳ್ಳಾರಿಯಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಇಂದು ಮುಂಜಾನೆಯಿಂದಲೇ ಮೋಡಕವಿದ ವಾತಾವರಣಿವಿದೆ. ಕಳೆದರಡು ದಿನಗಳಿಂದ ನಗರದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಸಿಲಿಕಾನ್ ಸಿಟಿಯ ಜನಕ್ಕೆ ವರುಣ ತಂಪರೆದಿದ್ದಾನೆ. ಸದ್ಯ ಬೆಂಗಳೂರು ಕೂಲ್ ಕೂಲ್ ಆಗಿದೆ.